1.1.23

ಮಸುಕಾದ 2022ರ ಡೈರಿಯಿಂದ....

                           -1-

ನವ ವರುಷ ಬಂತೆಂದರೆ ಒಂದಷ್ಟು ಸಂಭ್ರಮ, 

ಕಳೆದ ವರ್ಷದ ನೋವುಗಳೆಲ್ಲವನ್ನೂ 

ಮನದ ಮೂಲೆಗೆ ತಳ್ಳಿ ದೂ....ರದಲ್ಲಿ 

ಸಿಡಿದು ಮಿನುಗುವ ಬೆಳಕಿನ ಪುಂಜಗಳ 

ಬೆನ್ನಿಡಿದು ಓಡುವ ಉತ್ಸಾಹ...

ಈ ವರ್ಷ ʻಅದನ್ನುʼ ಮಾಡಿಯೇ 

ತೀರಬೇಕೆಂಬ ಹೊಸ ನಿರ್ಧಾರಗಳ ಭೋರ್ಗರೆತ

ಹೊಸ ಡೈರಿಯಲ್ಲಿ 

ದಿನದಿನವೂ ಬದುಕಿನ 

ಹೆಜ್ಜೆಗುರುತುಗಳ ಗೀಚಿ 

ಕಾಪಿಡುವ ಹುಮ್ಮಸ್ಸು








              -2-

ಹೊಸವರ್ಷ ಸ್ವಾಗತಕ್ಕೆ 

ಶೀಷಾವಿನೋದದಲ್ಲಿ ಮುಳುಗೆದ್ದು 

ಮರುದಿನ ಸೂರ್ಯಮುಳುಗುವರೆಗೆ 

ಕಣ್ಬಿಡಲಾರದೆ ಒದ್ದಾಟ 

ಹಳೆಯ ಕನಸುಗಳು, 

ದುಃಖ ದುಮ್ಮಾನಗಳ 

ಹ್ಯಾಂಗೋವರ್‌, ವಾಂತಿ.

ಹೊಸ ಕ್ಯಾಲೆಂಡರಿನ ಪುಟಗಳು 

ಮ.ಗು.ಚು.ತ್ತಾ 

ಹೋದಂತೆಯೇ 2023ರ 

ಅಕ್ಷರಗಳು ಮಸುಕು

ಖಾಲಿ ಉಳಿದ ಡೈರಿಯ ಪುಟ

ಭಾರವಾಗಿ ಉಳಿದ ಮನ

ಮತ್ತೆ ವರ್ಷಾಂತ್ಯಕ್ಕೆ ಗಮನ


-ವೇಣುವಿನೋದ್

01-01-2023


10.2.19

ಕೇದಾರಕಂಠದ ಚಳಿಗಾಲ ಚಾರಣ

sunrise on kedarkantha peak


ಮೈನಸ್ 10-15ರ ವರೆಗೂ ಇಳಿಯುವ ತಾಪಮಾನ...ರಾಶಿ ರಾಶಿ ಹತ್ತಿಯಂತೆ ಬಿದ್ದಿರುವ ಹಿಮ...ರಕ್ತವೂ ಹೆಪ್ಪುಗಟ್ಟೀತೆ ಎನ್ನುವ ಚಳಿ...ಬಿದ್ದ ಮಂಜಿನಿಂದ ಕಾಲೆತ್ತುತ್ತಾ ನಡೆದು ಸುತ್ತ ನೋಡಿದರೆ ಬೆರಗುಗೊಳಿಸುವ ಹಿಮಶಿಖರಗಳ ಸಾಲು...

ಹಿಮಾಲಯದ ವಿವಿಧ ಪ್ರವಾಸೀ ತಾಣಗಳಿಗೆ, ಚಾರಣ ಪ್ರದೇಶಗಳಿಗೆ ಬೇಸಿಗೆಯಲ್ಲಿ ನಡೆದು ನೋಡುವವರ ಸಂಖ್ಯೆ ಹೆಚ್ಚು. ಡಿಸೆಂಬರ್‌ನಿಂದ ಫೆಬ್ರವರಿ ವರೆಗೆ ಹಿಮಾಲಯದಲ್ಲಿ ಕಠೋರ ಚಳಿಗಾಲ..ಆದರೆ ಆಗಲೂ ಅದನ್ನು ಇಷ್ಟಪಟ್ಟು ಚಾರಣಕ್ಕೆ ಹೋಗುವವರ ಸಂಖ್ಯೆ ಇತ್ತಿತ್ತಲಾಗಿ ಹೆಚ್ಚತೊಡಗಿದೆ.
ಹೀಗೆ ಸಾಗಿದವರಿಗೆ ಸಿಗುವ ಬೋನಸ್ ಎಂದರೆ ಮೂರು ಮೂರು ಪದರ ಬಟ್ಟೆಯನ್ನು ಮೈಮೇಲೆ ಹಾಕಿಕೊಳ್ಳುವ ವಿಶೇಷ ಅನುಭವ, ಹೊರಗೆ ಸುತ್ತ ಕಾಣುವ ಪೈನ್, ಓಕ್ ವೃಕ್ಷ ಸಾಲುಗಳ ಮಧ್ಯೆ ಹತ್ತಿಯ ಚೂರಿನಂತೆ ಸುರಿಯುವ ಹಿಮದ ಮಳೆಯನ್ನು ಟೆಂಟ್ ಒಳಗೆ ಕುಳಿತು ವೀಕ್ಷಿಸುವ, ಮುಖದಲ್ಲಿ ಇನ್ನು ಮುಚ್ಚಲು ಜಾಗವಿಲ್ಲದಷ್ಟು ಮಂಕಿ ಕ್ಯಾಪ್ ಧರಿಸಿ, ಕೇವಲ ಮೂಗು ಕಣ್ಣು ಬಾಯಿಯನ್ನಷ್ಟೇ ಉಳಿಸಿ, ಬಿಸಿಬಿಸಿ ಕಾಫಿ ಹೀರುವ ಸುಖ ಇನ್ನೆಲ್ಲಿ ಸಿಗಲು ಸಾಧ್ಯ!

ಉತ್ತರಾಖಂಡದ ಕೇದಾರಕಂಠ
ಹಿಮಾಲಯದಲ್ಲಿ ತೀರ್ಥಾಟನೆಗೆ ತೆರಳುವವರಿಗೆ ಕೇದಾರನಾಥನ ಪರಿಚಯ ಇದ್ದೇ ಇದೆ. ಆದರೆ ನಾನಿಲ್ಲಿ ಹೇಳಹೊರಟಿರುವುದು ಕೇದಾರನಾಥ ಕ್ಷೇತ್ರದಿಂದ 100 ಕಿ.ಮೀ ದೂರವಿರುವ ಕೇದಾರಕಂಠದ ಬಗ್ಗೆ.
ಸಮುದ್ರ ಮಟ್ಟದಿಂದ 12900 ಅಡಿ ಎತ್ತರದಲ್ಲಿರುವ ಪರ್ವತ ಶಿಖರ ಕೇದಾರಕಂಠ. ಇದರ ಮೇಲ್ಭಾಗದಲ್ಲಿ ಚಿಕ್ಕ ಗುಡಿಯಿದೆ, ಅಲ್ಲಿ ಗಾಢವಾಗಿ ಸುರಿದಿರುವ ಮಂಜಿನ ನಡುವೆ ಕಪ್ಪು ಕಲ್ಲಿನ ಗಣಪನಿದ್ದಾನೆ. ರಾಶಿ ಕಲ್ಲುಗಳ ನಡುವೆ ತ್ರಿಶೂಲವಿದೆ. ಅದು ಬಿಟ್ಟರೆ ಅದೊಂದು ಸಾಹಸೀ ಚಾರಣಿಗರಿಗೆ ಸವಾಲೆಸೆಯುವ ಸುಂದರ ಹಿಮ-ಕಲ್ಲುಗಳ ಬೆಟ್ಟ.
ಉತ್ತರಾಖಂಡ್ ರಾಜ್ಯದ ಉತ್ತರ ಕಾಶಿ ಜಿಲ್ಲೆಯ ಪುರೋಲಾ ಎಂಬ ಪಟ್ಟಣಕ್ಕೆ ತಾಗಿಕೊಂಡಿರುವ ಸಾಂಕ್ರಿ ಎಂಬ ಹಳ್ಳಿಯೇ ಕೇದಾರಕಂಠಕ್ಕೆ ಹೋಗುವ ದ್ವಾರ.ಹಿಮಾಲಯವನ್ನು ಚಳಿಗಾಲದಲ್ಲಿ ನೋಡಲೇಬೇಕು ಎಂಬ ಹುಮ್ಮಸ್ಸಿನವರಿಗೆ ಮುಕ್ತ ಆಹ್ವಾನ ನೀಡುತ್ತದೆ ಕೇದಾರಕಂಠ.

ಸಾಂಕ್ರಿಯೆಂಬ ಹಳ್ಳಿ

ಗೋವಿಂದ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಗಢವಾಲ್ ಶ್ರೇಣಿಯ ಶಿಖರಗಳಲ್ಲಿ ಕೇದಾರಕಂಠವೂ ಒಂದು. ಕೇದಾರಕಂಠಕ್ಕೆ ಹೋಗುವುದಕ್ಕೆ ಮೊದಲು ನಿಮ್ಮನ್ನು ಅಲ್ಲಿನ ವಾತಾವರಣಕ್ಕೆ ಹದಗೊಳಿಸುವುದಕ್ಕೆ(ಪರ್ವಾತೋರಹಣ ಭಾಷೆಯಲ್ಲಿ ಇದಕ್ಕೆ ಅಕ್ಲಮಟೈಸೇಶನ್ ಎನ್ನುತ್ತಾರೆ) ಇದೇ ಹಳ್ಳಿಯಲ್ಲಿ ಎರಡು ದಿನ ಇರಿಸಲಾಗುತ್ತದೆ.

ಮೈನಸ್ ಡಿಗ್ರಿ ಚಳಿ ಎಂದರೆ ಹೇಗಿರುತ್ತದೆ ಎನ್ನುವುದು ಇಲ್ಲಿ ತಿಳಿಯುತ್ತದೆ.  ಕನಿಷ್ಠ ಸೌಲಭ್ಯವಿದ್ದ ಹಳ್ಳಿಯಾಗಿದ್ದ ಸಾಂಕ್ರಿ ಕೇವಲ ಚಾರಣದ ಬೇಸ್ ಕ್ಯಾಂಪ್ ಎಂಬ ಕಾರಣದಿಂದ ಸಾಕಷ್ಟು ಅಭಿವೃದ್ಧಿ ಕಂಡಿದೆ. ನಾನು ತೆರಳಿದ್ದ ಯೂತ್ ಹಾಸ್ಟಲ್‌ಅಸೋಸಿಯೇಶನ್ ಆಫ್ ಇಂಡಿಯಾದ ಕ್ಯಾಂಪ್ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಚಾರಣ ಸಂಸ್ಥೆಗಳು ಇಲ್ಲಿ ಬೇಸ್ ಕ್ಯಾಂಪ್ ಹಾಕಿಕೊಂಡು ಚಾರಣಾಸಕ್ತರನ್ನು ಕೇದಾರಕಂಠವೂ ಸೇರಿದಂತೆ ಹಲವು ಕಡೆಗಳಿಗೆ ಕೊಂಡೊಯ್ಯುತ್ತದೆ.
ಪರ್ವತದ ಇಳಿಜಾರಿನಲ್ಲಿರುವ ಸಾಂಕ್ರಿಯಲ್ಲಿ ಮೇಲಿನಿಂದ ಕೆಳಗಿನ ವರೆಗೂ ವಿವಿಧ ಹಂತಗಳಲ್ಲಿ ಗದ್ದೆ ನಿರ್ಮಿಸಿ ಕೃಷಿ, ಸೇಬಿನ ತೋಟ ರಚಿಸಲಾಗಿದೆ. ಇದು ಬಿಟ್ಟರೆ ಹೈನುಗಾರಿಕೆ. ಯುವಕರಿಗೆ ಪ್ರಮುಖವಾಗಿ ಚಾರಣದ ಸೀಸನ್‌ನಲ್ಲಿ ಗೈಡ್‌ಗಳಾಗಿ ಹೋಗುವುದು ಆಪ್ಯಾಯಮಾನ.

sliding in snow is fun
majestic view
ಜುಡಾ ಕಾ ತಾಲಾಬ್ ಎಂಬ ಕೊಳ!

ಸಾಂಕ್ರಿಯಿಂದ ಹೊರಟು ಕೇದಾರಕಂಠತ್ತ ಹೆಜ್ಜೆ ಹಾಕುವಾಗ ಮೊದಲು ಸಿಗುವ ತಾಣ ಜುಡಾ ಕಾ ತಾಲಾಬ್. ಎಂದರೆ ಜೋಡಿ ಸರೋವರ. ಎರಡು ಕೊಳಗಳು ಒಟ್ಟಾಗಿರುತ್ತದೆ, ಆದರೆ ಇದು ಚಳಿಗಾಲವಲ್ಲವೇ ಇಡೀ ಕೊಳವೇ ಐಸ್ ಆಗಿ ಪರಿವರ್ತಿತಗೊಂಡಿದೆ. ಆಗಮಿಸುವ ಚಾರಣಿಗರು ಕೊಳದ ಮೇಲಿನ ಘನವಾದ ಮಂಜುಗಡ್ಡೆಯ ಮೇಲೆ ಕುಣಿದಾಡಿ ಖುಷಿ ಪಡುತ್ತಾರೆ. ಸುತ್ತಲೂ ಪೈನ್ ವೃಕ್ಷಗಳು ಅದರ ಮೇಲೆ ಇಣುಕುವ ಪರ್ವತ ಶಿಖರ, ಕೆಳಗೆ ಮಂಜುಗಟ್ಟಿದ ಕೊಳ, ಈ ನೋಟವನ್ನು ಚಾರಣಿಗರು ಮನದಣಿಯೇ ಆಸ್ವಾದಿಸುತ್ತಾರೆ.
colourfull tents of various trekking teams
ಜುಡಾ ಕಾ ತಾಲಾಬ್ ಕೆಡುತ್ತದೆ ಎಂಬ ಆತಂಕದಿಂದ ಉತ್ತರಾಖಂಡ ರಾಜ್ಯ ಸರ್ಕಾರ ಅದರ ಬದಿಯೇ ಶಿಬಿರ ಹಾಕುವುದನ್ನು ನಿಷೇಧಿಸುರುವುದರಿಂದ ಅದರ ತುಸು ಕೆಳಗಿನ ಕಾಡಿನಲ್ಲೇ ಶಿಬಿರ ಹೂಡಿದೆವು. ಸಾಯಂಕಾಲ 6ಕ್ಕೆಲ್ಲಾ ಈ ಪರ್ವತದಲ್ಲಿ ಕತ್ತಲಾವರಿಸುತ್ತದೆ. ಶಿಬಿರಕ್ಕೆ ವಿದ್ಯುತ್ ಇಲ್ಲ, ಹಾಗಾಗಿ 5.30ಕ್ಕೆ ಊಟ, 6-7ಕ್ಕೇ ಟೆಂಟ್ ಒಳಗೆ ಹೋಗಿ ಸ್ಲೀಪಿಂಗ್ ಬ್ಯಾಗ್‌ನೊಳಗೆ ಹೊಕ್ಕು ಮಲಗಿಬಿಡಬೇಕು!
ಮರುದಿನ ಪ್ರಯಾಣ ಲುಹಾಸು ಎನ್ನುವ ಪ್ರದೇಶಕ್ಕೆ. ಇದು ಕೇದಾರಕಂಠದ ಬುಡದಲ್ಲೇ ಇರುವ ಕ್ಯಾಂಪ್. ಕೇದಾರಕಂಠದ ತಪ್ಪಲಿನ ದಟ್ಟ ಪೈನ್ ವೃಕ್ಷ, ದೇವದಾರ್, ಓಕ್ ವೃಕ್ಷಗಳ ಕಾಡಿನ ಬದಿಯಲ್ಲಿನ ಮನಮೋಹಕ ಶಿಬಿರ. ಕೆಲ ಹೊತ್ತು ಹೊರಗೆ ಸುಮ್ಮನೆ ನಿಂತರೂ ಮರಗಟ್ಟಿಸುವ ಚಳಿ!
snow fallen on rocks and trees


✷✷✷✷✷✷✷✷


ಇದೇ ಶ್ರೇಣಿಯಲ್ಲಿ ಬರುವ ಹರ್ ಕೀ ದೂನ್, ರುಪಿನ್ ಪಾಸ್, ಬಾಲಿ ಪಾಸ್ ಮುಂತಾದ ಪರ್ವತ ಸಮೂಹಗಳು ಸೇರಿವೆ. ಗಢವಾಲ್ ಹಿಮಾಲಯದ ಅತಿ ಪವಿತ್ರ ಎಂದು ಪರಿಗಣಿಸಲ್ಪಟ್ಟ ಸ್ವರ್ಗಾರೋಹಿಣಿ ಪರ್ವತ ಸಮೂಹ ಕೇದಾರಕಂಠ ಚಾರಣದುದ್ದಕ್ಕೂ ನಿಮ್ಮನ್ನು ವೀಕ್ಷಿಸುತ್ತಲೇ ಇರುತ್ತದೆ. ಅದರ ಪಕ್ಕದಲ್ಲಿರುವ ಕಾಲಾ ನಾಗ್(ಕಪ್ಪು ನಾಗನಂತೆ ಗೋಚರಿಸುವ ಕಾರಣ ಈ ಹೆಸರು), ಅದರ ಪಕ್ಕದಲ್ಲೇ ಬಂಡಾರ್‌ಪೂಂಚ್(ಹನುಮಂತನ ಬಾಲ), ಬಳಿಕ ಯಮುನೋತ್ರಿ, ಗಂಗೋತ್ರಿಗಳು ಗೋಚರಿಸುತ್ತವೆ.

tents of trekking groups
Related Posts Plugin for WordPress, Blogger...