26.2.07

ಮುಂಗಾರು ಮಳೆಯಲ್ಲಿ ತೊಯ್ದಾಗ

ನಾನೂ ಮೊನ್ನೆ ಮುಂಗಾರು ಮಳೆಗೆ ಮೈಯೊಡ್ಡಿದೆ!


ಪರವಾಗಿಲ್ಲ, ಈಗೀಗ ಕನ್ನಡದಲ್ಲೂ ಹಿಂದೆ ಇದ್ದಂತಹ ಸುಂದರ ಚಿತ್ರಗಳು ಬರುತ್ತಿವೆ ಅನ್ನಿಸ್ತು. ಮಂಗಳೂರಿನ ಸೆಂಟ್ರಲ್ ಥಿಯೇಟರಲ್ಲಿ ೫ನೇ ವಾರ ಧೋ ಎಂದು ಮುಂಗಾರು ಮಳೆ ಸುರೀತಾ ಇದೆ. ಜನ ಅದರಲ್ಲೂ ಯುವಜನ ಮುಗಿಬೀಳ್ತಾ ಇದ್ದಾರೆ. ಹಾಗೆ ನೋಡಿದರೆ ಕಥೆಯಲ್ಲಿ ಏನಿಲ್ಲ, ಬಿಗಿಯಾದ ಸ್ಕ್ರಿಪ್ಟ್, ಕರಾರುವಾಕ್ ನಿರ್ದೇಶನ, ಹಾಗೂ 'ಗಣೇಶನ ಮಹಿಮೆ' ಚಿತ್ರವನ್ನು ಎತ್ತಿಹಿಡಿದಿದೆ.
ಒಂದು ಕ್ಷಣವೂ ಬೋರ್‍ ಹೊಡೆಸದೆ ಸಹಜವಾಗಿ ಸುರಿಯುತ್ತಾ ಹೋಗುತ್ತದೆ ಮುಂಗಾರು ಮಳೆ. ನನಗೆ ಖುಷಿ ಕೊಟ್ಟದ್ದು ಚಿತ್ರದ ಫೋಟೋಗ್ರಫಿ ಮತ್ತು ಸಂಕಲನ. ಧೋ ಎಂದು ಸುರಿಯುವ ಮಳೆಯಲ್ಲಿ 'ಜೋಕು'ಮಾರ ಗಣೇಶನ ಮಾತಿನ ಮೋಡಿಯಲ್ಲಿ ಪ್ರೇಕ್ಷಕ ತಲ್ಲೀನನಾಗಿ ಬಿಡುತ್ತಾನೆ. ಚಿತ್ರದಲ್ಲಿ ನಾಯಕನೇ ಹಾಸ್ಯ ಚಕ್ರವರ್ತಿಯಾದ್ದರಿಂದ ಈ ಸ್ಥಾನ ಬೇರ್‍ಯಾರಿಗೂ ಕೊಟ್ಟಿಲ್ಲ.
ಪ್ರೀತಿ ಹುಟ್ಟೋದಕ್ಕೆ ಪಾರ್ಕ್, ಸಿನಿಮಾ ಮಂದಿರವೇ ಬೇಕಿಲ್ಲ. ಒಂದು ಚರಂಡಿಯಲ್ಲಾದರೂ ಪ್ರೇಮ ಹುಟ್ಟುತ್ತದೆ ಎನ್ನುವ ಸಂದೇಶ ಚಿತ್ರದ ಆರಂಭದಲ್ಲೇ ಬರುತ್ತದೆ. ಕೆಟ್ಟುಹೋದ ರಸ್ತೆಯಲ್ಲಿ ಭೋರಿಡುವ ಮಳೆಯಲ್ಲಿನ ಮಾರಾಮಾರಿ ದೃಶ್ಯ ಸಹಜವಾಗಿ ಮೂಡಿಬಂದಿದೆ.
ಚಿತ್ರದ ನಾಯಕಿ ನಂದಿನಿಯನ್ನು ಮದುವೆಯಾಗುವ ಕನಸಿರಿಸಿಕೊಂಡ ವಿಲನ್‌ಗೆ ಚಿತ್ರದ ಕೊನೆಯಲ್ಲಿ ಕುಡಿದ ಗಣೇಶ ಚೆನ್ನಾಗಿ ಬಾರಿಸಿ, ಕೊನೆಯಲ್ಲಿ ಆತನಿಗೆ ಸಾಂತ್ವನ ಹೇಳುವ ದೃಶ್ಯವೊಂದೇ ಸಾಕು ಚಿತ್ರದ ವಿಶೇಷತೆ ತಿಳಿಸಲು.
ಚಿತ್ರದಲ್ಲಿ ಎವರ್‍ಗ್ರೀನ್ ಆಗಿ ಉಳಿಯುವ ಅಂಶವೊಂದಿದೆ. ಚಿತ್ರದ ಕೊನೆಯಲ್ಲಿ ತನ್ನೆಲ್ಲಾ ಭಾವನೆಗಳನ್ನೂ ಗಣೇಶ ಹೇಳಿಕೊಳ್ಳುವ ಆತನ ಅಂತರಂಗದ ಗೆಳೆಯ ದೇವದಾಸ(ಮುದ್ದಾದ ಮೊಲ)ನ ಮೃತಶರೀರವನ್ನು ಮಲ್ಲಿಗೆ ತುಂಬಿದ ಬುಟ್ಟಿಯಲ್ಲಿರಿಸಿ ಭೋರ್ಗರೆಯುವ ಜಲಪಾತದ ಮಡಿಲಲ್ಲಿ ಮಣ್ಣು ಮಾಡೋ ದೃಶ್ಯವದು. ಪ್ರತಿಯೊಬ್ಬ ಚಿತ್ರಪ್ರೇಮಿಯ ಮನವನ್ನೂ ಕಾಡುವ ಅಂಶವೂ ಇದಾಗಬಹುದು. ಯಾಕೆಂದರೆ ಗಣೇಶ ತನ್ನೆಲ್ಲ ನೋವು ನಲಿವನ್ನೂ ಹೇಳಿಕೊಳ್ಳೋದು ದೇವದಾಸ್ ಬಳಿಯೇ.
ಕೊನೆಯಲ್ಲಿ ಹೇಳಬಹುದಾದ್ದು ಎಂದರೆ, ನಾಯಕನಷ್ಟೇ ಚಾರ್ಮ್ ಇರೋ ನಾಯಕಿ ಈ ಚಿತ್ರಕ್ಕೆ ಬೇಕಿತ್ತು ಅನ್ನೋದು. ಚಿತ್ರದಲ್ಲಿ ಜೋಗ ಜಲಪಾತದ ಮಳೆಗಾಲದ ರುದ್ರರಮಣೀಯ ದೃಶ್ಯ ತೋರಿಸಿದ್ದೇನೋ ಸರಿ. ಆದರೆ ನಾಯಕಿಯ ಮನೆ ಇರುವುದು ಮಡಿಕೇರಿ ಎನ್ನುವಾಗ ಕೊಡಗಿನ ಜಲಪಾತವೊಂದನ್ನೇ ತೋರಿಸಿದ್ದರೆ ಚಿತ್ರ ಇನ್ನಷ್ಟು ಸಹಜವಾಗಿರುತ್ತಿತ್ತೇನೋ.
ಚಿತ್ರಕೃಪೆ : moviesgallery.com

14.2.07

ಬಾರೆ, ಬರಸೆಳೆಯೆ!

ಮಾತಿಲ್ಲದೇ ಮೌನದ
ಗುಹೆ ಹೊಕ್ಕು ಕುಳಿತವಳೆ
ನವಿರು ಹಾಸ್ಯಕ್ಕೂ
ಮುಖವೂದಿಸಿದವಳೆ
ಬಾರೆ, ಬರಸೆಳೆಯೆ!

ಗದ್ದೆಹಾದಿಯುದ್ದಕ್ಕೂ
ಬಿಸಿಯುಸಿರು ಬಿತ್ತಿರುವೆ,
ಜಡೆಯೆಳೆದವನ
ಕಡೆಗೊಂದು ಬಿರುನೋಟ ಬೇರೆ!

ಆಕಾಶದಗಲಕ್ಕು
ದಟ್ಟೈಸಿದೆ ಮುಗಿಲು,
ನಿನ್ನ ಕಂಗಳಾಗಸದಲ್ಲು
ಸಿಡಿಯುತಿದೆ ಸಿಡಿಲು
ಸಾಕಿನ್ನು ಹುಸಿಗೋಪ
ಸಾಕುಮಾಡಿನ್ನು

(ಗಾಢವಾಗಿ ಪ್ರೇಮಿಸುವ ಪ್ರೇಮಿಗಳಿಗಾಗಿ !)

4.2.07

ಆಕೆಗೊಂದು ಬಿನ್ನಹ



ನನ್ನ ನಿನ್ನ ನಡುವೆ
ಏಕಾಂತದಲ್ಲಿ ಯಾರೂ
ಇಲ್ಲ ಎನ್ನುವಾಗಲೇ
ಕಿಟಿಕಿಯಲ್ಲಿ ನೋಡಿ ನಕ್ಕಿದ್ಗ
ಹುಣ್ಣಿಮೆ ಚಂದ್ರಮ
ಈಗ ಮೋಡದ ಸೆರೆ
ಸೇರಿದ್ದಾನೆ....
ಈಗಲಾದರೂ
ಮುದ್ದಿಕ್ಕಿ ಬಿಡೇ ಒಮ್ಮೆ!
Related Posts Plugin for WordPress, Blogger...