24.3.08

ಶಿರಾಡಿಯ ವೆಂಕಟಗಿರಿ ನೆತ್ತಿಯಲ್ಲಿ(atop shiradi venkatagiri peak)


ಬೆಂಗಳೂರಿಂದ-ಮಂಗಳೂರಿಗೆ ಬರುವವರನ್ನು ಯಾವಾಗಲೂ ಸೆಳೆಯುತ್ತದೆ ಶಿರಾಡಿ ಘಾಟ್‌ನ ಅರಣ್ಯ, ಅಲ್ಲಿನ ಇಕ್ಕೆಲಗಳಲ್ಲಿನ ಹೆಸರೇ ಅರಿಯದ ಗಿರಿ ಶಿಖರಗಳು.
ನಾನೂ ಅನೇಕ ಬಾರಿ ಆ ಗಿರಿಗಳ ಮೇಲೇರುವ ಕನಸು ಕಂಡದ್ದಿದೆ. ಶಿರಾಡಿ ಘಾಟಿಯ ಹಚ್ಚ ಹಸಿರಿನ ಸೆರಗಲ್ಲಿ ಹರಿಯುತ್ತದೆ ಕೆಂಪು ಹೊಳೆ. ಇದೀಗ ಈ ಹೊಳೆಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಮಿನಿ ಹೈಡ್ರೋ ಸ್ಥಾವರ ಸ್ಥಾಪನೆಯಾಗಿದೆ, ಒಂದಷ್ಟು ಹಸಿರನ್ನು ಈ ಸ್ಥಾವರ ನುಂಗಿ ಹಾಕಿದ್ದೂ ಇದೆ.
ಆದರೂ ಪ್ರಕೃತಿಯ ಸಹಚರ್ಯ ಬಯಸುವವರಿಗೆ ಶಿರಾಡಿಯ ಕಾಡು ಬೆಟ್ಟ ಯಾವಾಗಲೂ ಚೇತೋಹಾರಿ. ಇಲ್ಲಿಗೆ ನಡೆದು ನೋಡುವ ಕಾರ್ಯಕ್ರಮವೊಂದನ್ನು ಮಂಗಳೂರಿನ ಚಾರಣಿಗ ಮಿತ್ರ ದಿನೇಶ್ ಹೊಳ್ಳ ಆಯೋಜಿಸಿದ್ದರು. ಮಂಗಳೂರಿನಿಂದ ೨೧ ಮಂದಿಯ ತಂಡ ಹೊರಟಿತು ಶಿರಾಡಿಯತ್ತ. ಮಂಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಹಾಗಾಗಿ ನಾವು ಹೋಗಬೇಕು ಎಂದಿದ್ದ ಶಿಖರ ‘ವೆಂಕಟಗಿರಿ’ ಹೋಗುವುದು ಸಾಧ್ಯವೇ ಎಂಬ ದಿಗಿಲೂ ನಮ್ಮಲ್ಲಿತ್ತು. ಮಳೆ ಇದ್ದರೆ ಗುಂಡ್ಯದ ರೈಲ್ವೇ ಹಳಿಯಲ್ಲಿ ನಡೆಯುವುದು ಎಂದು ನಿರ್ಧರಿಸಿ ಹೊರಟೆವು.

ಅಚ್ಚರಿ ಎಂದರೆ ನಾವು ಶಿರಾಡಿ ತಲಪುವಾಗ ಮಳೆ ಮಾಯ! ಗುಂಡ್ಯದಿಂದ ಬಲಕ್ಕೆ ತಿರುಗಿ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಮುಂದುವರಿದೆವು. ಅಲ್ಲಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ಎಡಕ್ಕೆ ಕವಲೊಡೆವ ಸಪುರ ರಸ್ತೆಯ ಸಮೀಪವೇ ಮಹೀಂದ್ರ ಟೆಂಪೊ ನಿಲ್ಲಿಸಿ, ಅಲ್ಲಿಂದ ವೆಂಕಟಗಿರಿಗೇ ಚಾರಣ ಆರಂಭ.
ಮೇ ತಿಂಗಳಾದ್ದರಿಂದ ಇನ್ನೂ ಅಲ್ಲಲ್ಲಿ ಗೇರು ಹಣ್ಣು. ಹಣ್ಣು ತಿಂದು ಬೀಜ ಅಲ್ಲೇ ಇರಿಸಿ ಮುಂದುವರಿದೆವು. ಅಕಾಲಿಕ ಮಳೆಯಾದ್ದರಿಂದ ತೋಡುಗಳಲ್ಲಿ ಕೆನ್ನೀರು ಹರಿಯುತ್ತಿತ್ತು. ಒಣಗಿದ್ದ ಮರಗಳೆಲ್ಲಾ ತೊಳೆದ ಹಾಗೆ ಕಾಣುತ್ತಿದ್ದವು, ಅಲ್ಲಲ್ಲಿ ಮತ್ತೆ ಹಸಿರು ಕಾಣುತ್ತಿತ್ತು. ಊರಿನವರೇ ಆದ ರಾಜಶೇಖರ್ ಅಲಿಯಾಸ್ ರಾಜಣ್ಣ ನಮಗೆ ಲೋಕಲ್ ಗೈಡ್.


ದೂರದಿಂದ ಎತ್ತರದಲ್ಲಿ ನಮ್ಮ ಚಾರಣ ತಾಣ ವೆಂಕಟಗಿರಿಯ ಬೋಳು ನೆತ್ತಿ ಕೈಬೀಸಿ ಕರೆಯುತ್ತಿತ್ತು.
ಸುಮಾರು ಅರ್ಧ ಗಂಟೆಯ ಪ್ರಯಾಣ ಮಾಡಿ ಊರಿನ ಮನೆಗಳ ನಡುವೆ ಸಾಗುತ್ತಾ ಕಾಡಿನ ಮಡಿಲು ಪ್ರವೇಶಿಸಿದ ನಾವು ಮಂಗಳೂರು-ಬೆಂಗಳೂರು ರೈಲ್ವೇ ಟ್ರಾಕ್ ಸೇರಿದೆವು. ಬೃಹತ್ ಸುರಂಗಮಾರ್ಗವೊಂದು ಅಲ್ಲೇ ಇತ್ತು. ಪಕ್ಕದಲ್ಲೇ ನೀರಿನ ತೋಡು.
ಮೋಡ ಕವಿದಿದ್ದರಿಂದ ಎಲ್ಲರಿಗೂ ಬೆವರು. ಅಲ್ಲೇ ಹಳಿಯ ಪಕ್ಕ ಕುಳಿತು ಒಂದಷ್ಟು ದಣಿವಾರಿಸಿದೆವು. ಬೆಂಗಳೂರಿನತ್ತ ಮುಖಮಾಡಿ ನಿಂತರೆ ಅದುರಿಗೆ ಸುರಂಗ, ಅದರ ಎಡ ಪಕ್ಕದಲ್ಲೇ ಒಂದು ಕಾಡು ದಾರಿ ಮುಂದುವರಿಯುತ್ತದೆ, ಅದರಲ್ಲಿ ಸಾಗಿದರೆ ಅರಣ್ಯ ಇಲಾಖೆಯವರು ರಚಿಸಿದ ಕಲ್ಲಿನ ಗುಪ್ಪೆಯೊಂದು ಸಿಗುತ್ತದೆ. ಕಲ್ಲಿನ ಗುಪ್ಪೆಗೆ ಎದುರೇ ಸಿಕ್ಕುವ ಕಾಲು ಹಾದಿಯೇ ನಮ್ಮ ಚಾರಣದ ಹಾದಿ. ದಾರಿಯಲ್ಲಿ ಹೇರಳವಾಗಿ ಕಂಡು ಬಂದದ್ದು ನಮಗೆ ಆನೆ ಲದ್ದಿ, ಆದರೆ ಆನೆ ಮಾತ್ರ ಎಲ್ಲೂ ನೋಡಲು ಸಿಗಲಿಲ್ಲ. ಅಥವಾ ನಮ್ಮ ತಂಡವನ್ನು ನೋಡಿ ಬೆದರಿ ದೂರ ಹೋಗಿರಲೂ ಬಹುದು. ಇದ್ದರೂ ನಮಗೆ ಕಾಣದಿರಬಹುದು. ಆದರೆ ಈ ಭಾಗದಲ್ಲಿ ಆನೆಗಳ ಗುಂಪೇ ಸಂಚರಿಸುತ್ತದೆ ಎಂಬ ಮಾಹಿತಿ ನಮಗೆ ನೀಡಿದ ರಾಜಣ್ಣ.


ಅಗಾಗ ಮಳೆಹನಿ, ತೇವಗೊಂಡ ಹುಲ್ಲು ತುಂಬಿದ ನೆಲ, ಮೇಲೆ ಹೋದಂತೆ ಕಾಡಕಿಚ್ಚು ಬಿದ್ದು ಸುಟ್ಟ ಮರ, ಹುಲ್ಲಿನ ಗಡ್ಡೆ ಕಂಡುಬಂದವು, ಮಳೆಯಾದ್ದರಿಂದ ಮರ, ಹುಲ್ಲು ಮತ್ತೆ ಚಿಗುರತೊಡಗಿದ್ದವು. ಎಡಕ್ಕೆ ನೋಡಿದರೆ ದಟ್ಟ ಅರಣ್ಯ, ಬಲಕ್ಕೆ ನೋಡಿದರೆ ಹತ್ತಿಯಂಥ ಮೋಡ ಹೊದ್ದು ಮುಗುಮ್ಮಾಗಿ ಕುಳಿತಿದೆ ‘ಮುಗಿಲಗಿರಿ’ ಶಿಖರ. ಎಲ್ಲಾ ಕಾಲದಲ್ಲೂ ಒಂದಷ್ಟು ಮೋಡಗಳನ್ನು ತನ್ನ ಹತ್ತಿರವೇ ಇರಿಸುವ ಕಾರಣ ಆ ಹೆಸರು ಪಡೆದುಕೊಂಡಿದೆ ಮುಗಿಲಗಿರಿ ಎಂಬ ಮಾಹಿತಿಕೊಡುತ್ತಾರೆ ದಿನೇಶ್ ಹೊಳ್ಳ.
ಗುಡ್ಡ ಏರುತ್ತಾ ಹೋದಂತೆ ಮರಗಳು ಕಡಮೆಯಾದವು, ಅಲ್ಲೊಂದು ಇಲ್ಲೊಂದು ನೆಲ್ಲಿ ಮರಗಳು. ಕೆಲವದರಲ್ಲಿ ಇನ್ನೂ ನೆಲ್ಲಿಕಾಯಿ ಉಳಿದಿತ್ತು. ನಮ್ಮಲ್ಲಿನ ‘ಹುಡುಗುಬುದ್ಧಿ’ ಕಲ್ಲು ಎಸೆಯುವಂತೆ ಪ್ರೇರೇಪಿಸದೆ ಇದ್ದೀತೇ, ದೊಡ್ಡವರೂ ಚಿಕ್ಕವರಾಗಿ ನೆಲ್ಲಿಕಾಯಿ ಉದುರಿಸಿದೆವು. ನೆಲ್ಲಿಕಾಯಿ ಸವಿಯುತ್ತ, ಅದರ ಮೇಲೆ ನೀರು ಕುಡಿದು ಆ ಸಿಹಿ ಅನುಭವಿಸುತ್ತಾ ಹೋಗುವಾಗ ಆಯಾಸ ಪರಿಹಾರ. ವೆಂಕಟಗಿರಿಯ ತುದಿಯೂ ಹತ್ತಿರವಾಗುತ್ತಿತ್ತು.
ಸುತ್ತ ನೋಡಿದರೆ ಬೇರೆ ಬೇರೆ ಶಿಖರ ಸಾಲು. ಅಮೇದಿಕಲ್ಲು, ಎತ್ತಿನಭುಜ, ಗಡಾಯಿಕಲ್ಲು, ಮಿಂಚುಕಲ್ಲು, ಇನ್ನೂ ಹಲವಾರು, ಕೆಳಗೆ ನೋಡಿದರೆ ಹಾವಿನಂತೆ ಕಾಣುವ ಕೆಂಪುಹೊಳೆ, ಅದರ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ೪೮.
ಸುಮಾರು ಮೂರು ಗಂಟೆಯ ಚಾರಣ ಸಾಕು ವೆಂಕಟಗಿರಿ ತಲಪಲು. ಶೇ.೯೦ರಷ್ಟು ಸುಲಭ ಚಾರಣವಾದರೆ, ಕೊನೆಯಲ್ಲಿ ಶಿಖರ ತಲಪುವಾಗ ಒಂದಷ್ಟು ಏದುಸಿರು ಖರ್ಚಾಗುತ್ತದೆ!
ಮೇಲೆ ತಲಪಿದರೆ ಬೋಳುಗುಡ್ಡ, ಒಂದೆರಡು ಕಲ್ಲಿನಗುಪ್ಪೆ, ಬಿರುಬೀಸು ಗಾಳಿ, ಅಷ್ಟೇ ಲಭ್ಯ. ಅದು ಬಿಟ್ಟರೆ ಸುತ್ತಲಿನ ಪ್ರಕೃತಿಯ ರಮ್ಯನೋಟ.
ಮಧ್ಯಾಹ್ನದ ಊಟಕ್ಕಾಗಿ ತಂದಿದ್ದ ಮೂಡೆ (moode) ಹೊಟ್ಟೆಗಿಳಿಸಿ, ಮತ್ತೆ ಕೆಳಕ್ಕಿಳಿದೆವು. ಕಲ್ಲುಗಳು ಬುಡ ಹಸಿಯಾದ ಕಾರಣ ಅಲುಗಾಡುತ್ತಿದ್ದು, ಎಚ್ಚರಿಕೆಯಿಂದ ಇಳಿಯಬೇಕಿತ್ತು, ಹಾಗಾಗಿ ಇಳಿಯಲೂ ಅಷ್ಟೇ ಸಮಯ ಬೇಕು.
ಇಳಿಯುವಾಗಲೂ ನಮ್ಮನ್ನು ಆಕರ್ಷಿಸುತ್ತಿದ್ದುದು, ಆ ಕಾಡು, ಆ ಬಿದ್ದ ತರಗೆಲೆ, ಮೋಡ ಕವಿದ ಮುಗಿಲಗಿರಿ, ಬೋಳು ತುದಿಯ ವೆಂಕಟಗಿರಿ.......
ಚಿತ್ರ : ಸುನಿಲ್

20.3.08

ಕಾಲ?

ಈಗೀಗ ನಡೆಯುತ್ತ
ಹೋಗುವಾಗ
ಹಿತ್ತಿಲಿನಾಚೆಗಿನ
ತಿರುವಿನಲ್ಲಿ ಕಾಲು
ಎಳೆಯುತ್ತ ಸಾಗುವಾಗ
ಹಿಂದೆ ಯಾರೋ
ಹೆಜ್ಜೆ ಹಾಕಿದಂತೆ
ಭಾಸವಾಗುತ್ತದೆ

ಯಾರೋ ದಾರಿಹೋಕರಿರಬಹುದು
ಅವರಷ್ಟಕ್ಕೆ ನಡೆಯುತ್ತಿರಬಹುದು
ಎಂದು ನಿರಾತಂಕವಾಗಿ
ನಡೆಯುತ್ತಲೇ ಇದ್ದೆ

ಸಮಯ ಉರುಳಿತು....

ಈಗೀಗ ಹಿಂದೆ ಬರುವವರು
ನನ್ನತ್ತಲೇ ಬಂದಂತೆ
ನನ್ನನ್ನು ಕರೆವಂತೆ
ಭಾಸವಾಗತೊಡಗಿದೆ

15.3.08

ಕಳೆದು ಹೋದ ಕನಸುಗಳು

ನಿನ್ನೆ ಕಂಡಿದ್ದ
ಸುಂದರ ಕನಸುಗಳನ್ನು
ಇಂದು ಹುಡುಕುವುದಕ್ಕೆ
ಬೆಳಕು ಸಾಲುತ್ತಿಲ್ಲ
ಆಳ ನೋಟಕ್ಕೆ ತಲಪಲು
ಬೆಳದಿಂಗಳ ಚಂದಿರನೂ
ಸೋತು ಹೋಗಿದ್ದಾನೆ
ಆಕಾಶದ ಕಪ್ಪುಕುಳಿಯಲ್ಲೆಲ್ಲೋ
ಹುದುಗಿಹೋಗಿವೆ
ಕನಸುಗಳು
ರಾತ್ರಿಗೂ ಬೇಕಿದೆ
ಒಂದಿಷ್ಟು ಸೂರ್ಯನ ಬೆಳಕು
ಏನಿಲ್ಲವೆಂದರೂ
ಒಂದೆರಡು ಹಿಡಿಯಷ್ಟು!

**********************

ನಿನ್ನ ಹೃದಯದಾಳಕ್ಕೆ ಜಿಗಿದು
ಅಲ್ಲಿರುವ ನನ್ನ ಬಿಂಬಗಳನ್ನು
ಹುಡುಕಲು ಮಾಡಿರುವ
ಪ್ರಯತ್ನಗಳೆಲ್ಲ
ಬರಿಯ ಬರಿದಾಗಿವೆ

ನಿನ್ನ ಮಾತಿನ ಪ್ರವಾಹಕ್ಕೆ
ಸಿಲುಕಿರುವ ನನ್ನ
ಕನಸುಗಳೆಲ್ಲ
ಕೊಚ್ಚಿಕೊಂಡು ಹೋಗಿವೆ
ದೂರದ ಕಪ್ಪು ಸಮುದ್ರದಲ್ಲೆಲ್ಲೋ
ಚೆಲ್ಲಾಪಿಲ್ಲಿಯಾಗಿ
ಕರಗಿಹೋಗಿವೆ

4.3.08

ಒಂದು ವಿಚಿತ್ರ ಸ್ವಗತ

ಹ್ಮ್ ನಾನೂ ಪ್ರವಾಸ ಹೊರಟಿದ್ದೇನೆ..

ಸ್ವರ್ಗದಂತಹ ಊರಿಗೆ ಕಾತರದಿಂದ ಹೊರಟಿದ್ದೇನೆ..

ಊರಿನ ನಗು ಅಳುಗಳನ್ನೆಲ್ಲೇ ಅಲ್ಲೇ ಕಟ್ಟಿಟ್ಟು

ಹೊಸ ನಗುವನ್ನಷ್ಟೇ ಸ್ವರ್ಗದಂತಹ ಊರಿನಲ್ಲಿ ಪಡೆಯೋಣ ಎಂಬ ಹಂಬಲದಲ್ಲಿ ಪ್ರವಾಸ ಹೊರಟಿದ್ದೇನೆ..

ಮನೆಯವಳು, ಮಕ್ಕಳು ಬಂದರೆ, ಅದು ತೆಗೆಯೋಣ, ಇದು ತೆಗೆಯೋಣ ಎಂದು ಪ್ರವಾಸದ ಕುಲಗೆಡಿಸುವುದು ಬೇಡ ಎಂದು ಮನೆಯಲ್ಲೇ ಬಿಟ್ಟಿದ್ದೇನೆ...

ಬಹಳ ದೂರದ ಪ್ರಯಾಣವದು ಹೊಸ ಊರು ಸ್ವರ್ಗದಂತಹ ಊರು ಹೇಗಿದೆಯೋ ಏನೋ ದೇವರೇ ಬಲ್ಲ...

ಆದರೂ ಪತ್ರಿಕೆಯಲ್ಲಿ ಸ್ವರ್ಗದಂತಹ ಊರು ಎಂದು ಬರೆದಿದ್ದಾರೆ ಖಂಡಿತಾ ಒಳ್ಳೆಯದಿರಬಹುದು..

ನಾನು ಹೋಗುವ ರೈಲು ವಿಶೇಷ ರೈಲು...

ಸ್ವರ್ಗದ ಊರಿಗೆ ಹೋಗುವ ರೈಲಾದ್ದರಿಂದ ಇಲ್ಲಿ ಎಲ್ಲ ಕೊಳಕು, ಕಷ್ಟಗಳಿಗೆ

ಮತ್ತು ಪ್ರಯಾಣಿಕರ ನಡುವೆ ಒಂದು ಪರಿಮಳ ಸೂಸುವ ಕರ್ಟನ್ ಇದೆ!

ಕಷ್ಟದಲ್ಲಿದ್ದು ಬೇಗುದಿಗಳಲ್ಲಿರುವವರು, ಕಷ್ಟಗಳನ್ನು ಹಣವೊಂದರಿಂದಲೇ

ಪರಿಹರಿಸಬಲ್ಲ ಮಾಂತ್ರಿಕರು ಈ ವಿಶೇಷ ರೈಲಲ್ಲಿದ್ದಾರೆ

ಈ ಕರ್ಟನ್ ಸರಿಸಿ ನೋಡುವುದಕ್ಕೆ ಬಿಡದಂತೆ ಭಟನೊಬ್ಬ ರೈಲಿನ ಪ್ರತೀ

ಕಂಪಾರ್ಟಮೆಂಟಲ್ಲೂ ನೆಟ್ಟ ಭಂಗಿಯಲ್ಲಿ ಕುಳಿತಿರುತ್ತಾನೆ

ರಾತ್ರಿಯಾಗಿದೆ, ಥತ್‌ ಏನು ಸೊಳ್ಳೆ ಕಚ್ಚುತ್ತಿವೆ ದರಿದ್ರದ್ದು...

ಮಕ್ಕಳು ಚೀರಿ ಅಳುತ್ತಿರುವಂತೆ ಕೇಳುತ್ತಿದೆ ಕೂಡಾ..

ಎಲ್ಲಿದ್ದೇವೆ ನಾವೀಗ ಎಂದು ಸಹಪ್ರಯಾಣಿಕ ಕಿರಿಚಿದ್ದಾನೆ..

‘ಸ್ವರ್ಗದ ಊರಿನ ಹತ್ತಿರವೇ ಇದ್ದೇವೆ, ಇನ್ನೇನು ಅರ್ಧಗಂಟೆಯ ಹಾದಿ,

ಅದರ ಕೆಳಗೇ ಇರುವ ಸ್ಲಂ ನಡುವೆ ರೈಲು

ಹಾದು ಹೋಗುತ್ತಿದೆ, ವ್ಯಥೆ ಪಡದಿರಿ, ಸ್ವರ್ಗದ ಊರು ಹೀಗಿಲ್ಲ’-ಕಾವಲು ಭಟ ಹೀಗೇನೋ ಒದರಿದ ನೆನಪು

ಸ್ವರ್ಗದೂರಿನ ಬಳಿಯೂ ಸ್ಲಮ್ಮೇ ಎಂದು ಪಕ್ಕದ

ಪ್ರಯಾಣಿಕ ಪಕಪಕನೆ ನಗುತ್ತಿದ್ದಾನೆ ಪಕ್ಕಾ ಹುಚ್ಚನಂತೆ

ನಾನೂ ಈಗ ಹುಚ್ಚನಾಗುವಂತೆ ಕಾಣುತ್ತಿದೆ,

ಇಲ್ಲವಾದರೆ ಸ್ವರ್ಗವೆಂದು ನಂಬಿ ಮತ್ತೆ ಸ್ಲಮ್ಮಿರುವ ಊರಿಗೆ

ಯಾಕೆ ಬರಬೇಕಿತ್ತು?

ಹುಹ್! ಒಮ್ಮೆ ಆ ಸ್ವರ್ಗವೋ ನರಕವೋ ತಲಪಲಿ

ಹಿಂದಿರುಗುವ ರೈಲಿಗೇರಿ ಮರಳಿ ಬಿಡೋಣ....

Related Posts Plugin for WordPress, Blogger...