18.11.08

ಅರಳಿ ನಿಂತ ತಾವರೆಗೆ.....

ಕೆಂದಾವರೆಗೆ
ಕೆಸರುಕೆರೆಯ
ಸಹವಾಸವೇಕೆ?
ಪ್ರೇಮವೇ
ಪ್ರೀತಿಯೇ
ಗೆಳೆತನವೇ?
ಅಥವಾ...
ಹೆಣ್ಣು
ತವರಿನಲ್ಲಿ ಬಾಲ್ಯ,
ತಾರುಣ್ಯ ಕಳೆದು
ಗಂಡನ ಮನೆಗೆ ಹೋಗುವ
ಹಾಗೆ
ದೇವರ ಪಾದಕ್ಕೋ
ಚೆಂದದ ಯುವತಿಯರ
ಮುಡಿಗೋ ಹೋಗುವ ಈ
ತಾವರೆಗೆ
ಕೆರೆಯೊಂದು
ತಾಯಿಮನೆಯೇ?!
ಸುವಾಸನೆಬೀರುವ
ಕಮಲಕ್ಕೆ ಕೆಸರಕೆರೆಯಲ್ಲಿರಲು
ತುಸುವೂ ಮುಜುಗರವಿಲ್ಲ
ಮನುಜರೊಳಗೆ
ಮಾತ್ರ ಈ ಭೇದವೇಕೆ
ಸಂಬಂಧಗಳಿಗೊಂದು
ಹೆಸರು ಯಾಕೆ?

ಕಮಲದಳ-೧

ನನ್ನೆದೆಯ ಕೊಳದಲ್ಲಿ
ಇದುವರೆಗೆ ಬೀಜವಾಗಿಯೇ
ಉಳಿದಿದ್ದ ತಾವರೆಯ
ಗಿಡವೊಂದು ಅರಳಿ
ನಿಂತು ನಗತೊಡಗಿದೆ
ಕಮಲದಳ-೨

ಮುಂಜಾನೆಯ ಮಂಜಿಗೆ
ಪರಿಮಳವೆಲ್ಲ
ತೊಳೆದುಹೋಗಿ
ಮುಖ ಕೆಂಪಾಗಿಸಿ
ಕುಳಿತಿದ್ದ ಕೆಂದಾವರೆಯ
ನೋಡಿದ
ಕೊಳದ ಕಪ್ಪೆ ನಸುನಕ್ಕಿತು!

16.11.08

ಮರಳುವುದೆಲ್ಲಿಗೆ?

ಇಂಥದೇ ಅದೊಂದು ದಿನ ಪಿರಿಪಿರಿ ಮಳೆಗೇ ಈ ಊರು ಸಾಕು ಎಂದು ನಿರ್ಧರಿಸಿದ್ದ ಗೋಪಾಲ ಬೆಳಗ್ಗೆ ಮೊದಲ ಬಸ್ಸೇರಿ ಹೊರಟು ಬಿಟ್ಟದ್ದು.....

ಈ ಊರಿನಲ್ಲಿ ಏನೇ ಮಾಡಿದರೂ ಪ್ರಯೋಜನವಿಲ್ಲ. ಭತ್ತಕ್ಕೆ ರೇಟಿಲ್ಲ, ಅಡಕೆಗೆ ರೇಟು ಏರುವುದಕ್ಕಿಂತ ಬೀಳೋದೇ ಹೆಚ್ಚು, ಒಳ್ಳೆ ಮೆಣಸು ಉದ್ಧಾರವಾಗಲು ರೋಗ ಬಿಡುವುದಿಲ್ಲ, ಬೇಸಗೆ ಬಂದ ನಂತರ ನೀರಿಗೂ ತತ್ವಾರ...ಹೀಗೆ ಎಲ್ಲ ಕೃಷಿಕರಂತೆ ಗೋಪಾಲನೂ ತತ್ತರಿಸಿದವನೇ. ಅದೇ ಕಾರಣಕ್ಕೆ ಊರು ಬಿಟ್ಟ ಸರಿಯಾಗಿ ಹತ್ತುವರ್ಷದ ನಂತರ ಮತ್ತೆ ಊರಿಗೆ ಅದೇ ಪಿರಿಪಿರಿ ಮಳೆಗೆ ಬಂದಿಳಿದಿದ್ದಾನೆ.

ಅಂದು.....

ಕೃಷಿವಿಜ್ಞಾನದಲ್ಲಿ ಎಂಎಸ್ಸಿ ಮಾಡಿ ರೈತನೇ ನನ್ನ ಆದರ್ಶ ಎಂದುಕೊಂಡು ವಿಶ್ವವಿದ್ಯಾಲಯದಿಂದ ಮತ್ತೆ ಮನೆಗೆ ಮರಳಿದ ಬೆರಳೆಣಿಕೆ ವೀರಾಧಿವೀರ ಯುವಕರಲ್ಲಿ ಗೋಪಾಲನೂ ಒಬ್ಬ. ಆತನ ಬ್ಯಾಚ್‌ನ ಉಳಿದವರೆಲ್ಲ ಉನ್ನತ ವ್ಯಾಸಂಗಕ್ಕೆಂದು ಫಾರಿನ್ನಿಗೋ, ಬೆಂಗಳೂರಿಗೋ ಹೀಗೆಲ್ಲೋ ಹೋದರೆ ಗೋಪಾಲ ಮಾತ್ರ ಮನೆಗೆ ಮರಳಿದ.
ಮನೆಯಲ್ಲಿ ತಂದೆ ಆರೋಗ್ಯ ಸರಿಯಿಲ್ಲದೆ ಮನೆ ಮೂಲೆಯಲ್ಲಿರಿಸಿದ್ದ ಹಾರೆ ಪಿಕಾಸಿ ಹೊರಬಂದವು. ಮನೆಯ ಕೊಟ್ಟಿಗೆಯಲ್ಲಿ ಊರಿನ ಗಿಡ್ಡ ತಳಿಯ ದನಗಳೊಂದಿಗೆ ಒಂದೆರಡು ಜೆರ್ಸಿಗಳು, ಕ್ರಾಸ್‌ಗಳೂ ಕಾಣಿಸಿಕೊಂಡು ಗೋಪಾಲನ ಊರಿನ ಕ್ಷೀರಕ್ರಾಂತಿಗೆ ತಮ್ಮದೂ ಕೊಡುಗೆ ಸಲ್ಲಿಸಿದವು. ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿ ಮನೆಯಲ್ಲಿ ಒಂಟಿಯಾಗಿದ್ದ ತಮ್ಮ ಮುಕುಂದನಿಗೂ ಅಣ್ಣನ ಹುರುಪು ನೋಡಿ ಚಿವುಟಿದಂತಾಯ್ತು.
ಅಣ್ಣ ತಮ್ಮ ಸೇರಿ ಗೇಯ್ದದ್ದೇ....ಮೊದಲ ಮೂರು ವರ್ಷದಲ್ಲಂತೂ ಯಶಸ್ಸೇ ಬಂತು...ಆದರೆ ಯಾವಾಗ ಭಾರತ ಗ್ಯಾಟಿಗೆ ಸಹಿ ಹಾಕಿತೋ ಇತ್ತ ಗೋಪಾಲನಿಗೂ ನಡುಕ ಶುರುವಾಯ್ತು. ಭತ್ತ ಅಡಕೆ, ಮೆಣಸು, ಬಾಳೆ ಎಲ್ಲದಕ್ಕೂ ದರ ಕುಸಿತ ಶುರುವಾಯ್ತು. ಸೊಸೈಟಿಗೆ ಅಡಕೆ ತೆಗೆದುಕೊಂಡು ಹೋಗಿ ಇಟ್ಟು ಬರುವುದೂ, ದಿನಗಟ್ಟಲೆ ರೇಟು ಏರಲು ಕಾಯುವುದೂ ಶುರುವಾಯ್ತು. ಎಷ್ಟಾದರೂ ಕೃಷಿವಿಜ್ಞಾನಿಯಲ್ಲವೇ ಗೋಪಾಲ, ಛಲ ಬಿಡಲಿಲ್ಲ. ಈ ಅಡಕೆ ಭತ್ತ ವಿಷಯ ಸಾಕು, ಫ್ಲೋರಿಕಲ್ಚರ್‍ ಮಾಡೋಣ ಎಂದು ತಮ್ಮನಿಗೆ ಹುರಿದುಂಬಿಸಿದ.

ಬ್ಯಾಂಕಿಂದ ಲೋನ್ ಮಾಡಿ ತೋಟದಾಚೆಗಿನ ಕೆರೆಯ ಮೇಲಿರುವ ಗುಡ್ಡ ಬುಲ್‌ಡೋಜರಲ್ಲಿ ಸಪಾಟಾಗಿಸಲಾಯ್ತು. ಅಲ್ಲೊಂದು ಗ್ರೀನ್‌ಹೌಸ್ ನಿರ್ಮಾಣವೂ ಆಯ್ತು. ಈ ಎಲ್ಲ ಹೊಸ ಬೆಳವಣಿಗೆಗಳನ್ನೂ ಗೋಪಾಲನ ಊರು ಅಚ್ಚರಿ, ಸಂಶಯ ಹಾಗೂ ವ್ಯಂಗ್ಯದಿಂದ ನೋಡಿತು.
ಇದೆಲ್ಲಾ ಮಾಡಿ ಈ ಪ್ರಾಣಿ ಉದ್ಧಾರವಾಗದು ಎಂದು ಊರಿನ ಹಿರಿಯರು ಆಡಿಕೊಂಡರು. ಹಾಗೆ ಊರಿನ ರಾಮಕೃಷ್ಣನ ಚಾ ಹೊಟೇಲಿನಲ್ಲಿ ಸಂಜೆ ಸಭೆ ಸೇರುವ ಊರ ಗಣ್ಯ ಮಧ್ಯವಯಸ್ಕರು ಗೋಪಾಲನ ಫ್ಲೋರಿಕಲ್ಚರಿನ ಸತ್ಯಾಸತ್ಯತೆಯನ್ನು ವಿಶ್ಲೇಷಿಸಿದರು. ಫ್ಲೋರಿಕಲ್ಚರು ಈ ಊರಿನ ಹವಾಗುಣಕ್ಕೆ ಒಗ್ಗದೆಂದೂ, ಇಲ್ಲಿನ ಗಿಡಗಲ್ಲಿ ಹೂವು ಅರಳುವುದು ಕಷ್ಟವೆಂದೂ, ಇದು ಕೇವಲ ಆರಂಭಶೂರತ್ವವಷ್ಟೇ ಎಂದೂ ತಮ್ಮ ಅನುಭವದ ಸಾರವನ್ನು ಹಂಚಿಕೊಂಡರು.
ಸಂಜೆ ದೂಮಣ್ಣನ ಗಡಂಗಿನಲ್ಲಿ ಗಂಗಸರ ಕುಡಿಯಲು ಬರುವವರಿಗೆ ಮಾತ್ರ ‘ಅವೆಂಚಿನವೋ ಕಲ್ಚರ್‌ಗೆ(ಅದೇನೋ ಕಲ್ಚರಂತೆ)’ ಎಂದು ಹೂವಿನ ಕೃಷಿಯೆನ್ನುವುದು ಒಂದು ದಿಗಿಲು ಮೂಡಿಸುವ ಬೆಳವಣಿಗೆಯಾಗಿತ್ತು.
ಹೀಗೆ ಊರಿನವರ ಪ್ರಲಾಪಗಳ ನಡುವೆಯೇ ಗೋಪಾಲನ ಹೂವಿನ ತೋಟದಲ್ಲಿ ಆರ್ಕಿಡ್‌ಗಳು, ಅಂತೂರಿಯಂ, ಗ್ಲಾಡಿಯೋಲಸ್‌ನಂತಹ ಗಿಡಗಳು ಸೊಂಪಾಗಿ ಬೆಳೆದವು. ಇನ್ನೇನು ಹೂ ಬಿಡಬೇಕು ಎಂಬಷ್ಟರಲ್ಲಿ ಭಾರೀ ಮಳೆ ಶುರುವಾಯ್ತು. ಅಕಾಲಿಕ ಮಳೆ, ಹವಾಮಾನ ವೈಪರೀತ್ಯವಾದ್ದರಿಂದಲೋ ಏನೋ ಗಿಡಗಳು ಹೂ ಬಿಡುವ ಮೊದಲೇ ಕೊಳೆಯಲು ಆರಂಭಿಸಿದವು.
'ಯಾನ್ ದುಂಬೇ ಪಣ್ತಿಜ್ಯ, ಇಂದು ಪೂರ ಯಾಪ ನಮ ಊರುಡು ನಡಪ್ಪೆರ'(ನಾನು ಮೊದಲೇ ಹೇಳಿದ್ದೆ ಇದೆಲ್ಲ ಯಾವಾಗ ನಡೆಯುವುದು) ಎನ್ನುವುದು ಊರವರೆಲ್ಲರ ಬಾಯಲ್ಲಿ ಕಾಮನ್ ಡಯಲಾಗ್ ಆಗಿ ಹೋಯ್ತು.

ಗೋಪಾಲನಿಗಂತೂ ಮನೆಯಲ್ಲಿ ತಂದೆಯ ಕೈನಲ್ಲೂ ಏನೇನೋ ಕೇಳಿಸಿಕೊಳ್ಳುವಂತಾಯ್ತು, ನಿನ್ನನ್ನು ಅಷ್ಟೆಲ್ಲಾ ಓದಿಸಿದ್ದು ಹೀಗೆ ಬರ್ಬಾದಾಗೋದಕ್ಕಲ್ಲ, ಇಲ್ಲಿ ಮತ್ಯಾಕೆ ಬಂದು ಹಾಳಾದೆ ಎಂದೆಲ್ಲ ತಂದೆ ತಾಯಿ ಇಬ್ಬರೂ ಸೇರಿ ಹಲುಬಿದಾಗ ಗೋಪಾಲನಿಗೆ ಕೆಡುಕೆನಿಸಿತು. ಏನಾದ್ರೂ ಮಾಡಿ ಸಾಲ ತೀರಿಸು, ನಾನೂ ಆದರೆ ಸಹಾಯ ಮಾಡುವೆ ಎಂದು ತಮ್ಮನಿಗೆ ಮಲಗುವಾಗ ರಾತ್ರಿ ಹೇಳಿದ್ದ, ಮನದಲ್ಲಿ ನಿರ್ಧಾರ ರೆಕ್ಕೆಗಟ್ಟಿತ್ತು.
ತಮ್ಮನಿಗೆ ಡೌಟು ಬಂದಂತೆಯೇ ಆಯಿತು. ಬೆಳಗ್ಗೆ ನೋಡುವಾಗ ಗೋಪಾಲ ಊರು ಬಿಟ್ಟಿದ್ದ. ಮೊದಲ ಬಸ್‌ನಲ್ಲಿ ಬ್ಯಾಗ್‌ ಹಿಡಿದು ಹೋಗಿದ್ದಾನೆ ಎಂಬುದನ್ನು ಕಂಡಕ್ಟರ್‍ ಊರಲ್ಲಿ ಟಾಂ ಟಾಂ ಮಾಡಿದ. ಸಾಲ ತೀರಿಸಲಾಗದೆ ಹೇಡಿಯಂತೆ ಓಡಿ ಹೋಗಿದ್ದಾನೆ ಎಂದೂ ಊರಿನವರೆಲ್ಲ ಪ್ರಚಾರ ಮಾಡಿದರು.

*******

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂಶೋಧಕನಾಗಿ ಸೇರಿಕೊಂಡ ಗೋಪಾಲ. ಏಳು ವರ್ಷಗಳಲ್ಲಿ ಪಿಎಚ್‌ಡಿ ಪದವಿ ಗಳಿಸಿದ. ಮಣ್ಣಿನ ಫಲವತ್ತತೆ ಬಗ್ಗೆ ವಿಶೇಷ ಆಸಕ್ತಿಯಿತ್ತು ಆತನಿಗೆ. ಬೆಂಗಳೂರಿನ ಹೊರವಲಯದ ರೈತನೊಬ್ಬನ ಫಲವತ್ತಾದ ಗದ್ದೆಯನ್ನು ಪ್ರಾಯೋಗಿಕ ಅಧ್ಯಯನಕ್ಕೆ ಬಳಸುತ್ತಿದ್ದ. ಆತ ಹೋದಲ್ಲೆಲ್ಲ ಹಣೆಬರಹವೇ ಹೀಗೆ ಎಂಬಂತಾಗಿ ವಿಶೇಷ ಐಟಿ ವಲಯಕ್ಕಾಗಿ ಆತನ ಪ್ರಯೋಗದ ಗದ್ದೆಯೂ ಸೇರಿದಂತೆ ಸುತ್ತಲಿನ ನೂರಾರು ಹೆಕ್ಟೇರ್‍ ಭೂಮಿ ಸರ್ಕಾರದ ವಶವಾಯಿತು.
ಗೋಪಾಲ, ಇನ್ನು ನಮ್ಮ ಸಂಶೋಧನೆಯಿಂದ ಏನೂ ಆಗದು, ದಿನವೂ ಅಲ್ಲಲ್ಲಿ ಭೂಮಿ ಸ್ವಾಧೀನಗೊಳ್ಳುತ್ತಿದೆ ನೋಡು, ರೈತರೇ ಮಣ್ಣಾದರೆ ಇನ್ನು ನಮ್ಮ ರೀಸರ್ಚ್ ಯಾರಿಗಾಗಿ ? ಹೀಗೊಂದು ಮೂಲಭೂತ ಪ್ರಶ್ನೆಯನ್ನೇ ಹಾಕಿದರು ವಿಶ್ವವಿದ್ಯಾಲಯದ ಕುಲಪತಿಗಳು.
ಊರಿನ ವಿಚಾರಗಳು ಇನ್ನೂ ಗೋಪಾಲನ ಕಿವಿಗೆ ಬೀಳುತ್ತಲೇ ಇದ್ದವು, ಕಾರಣ ಚಡ್ಡಿ ದೋಸ್ತಿ ರಾಘವನಿಂದ. ತಾನು ಎಲ್ಲಿದ್ದೇನೆ ಎನ್ನುವುದನ್ನು ರಾಘವನಿಗೆ ಮಾತ್ರ ತಿಳಿಸಿದ್ದ ಗೋಪಾಲ. ಇದನ್ನು ರಹಸ್ಯವಾಗಿಯೇ ಇಡುವಂತೆ ಹೇಳಿದ್ದ. ಇಲ್ಲವಾದರೆ ತಾನು ಬೆಂಗಳೂರಿನಲ್ಲಿರುವ ವಿಷಯಕ್ಕೂ ಮಸಾಲೆ ಅರೆಯುತ್ತಾರೆ ಎನ್ನುವುದು ಆತನಿಗೆ ಗೊತ್ತು.
ಅದೊಂದು ದಿನ ಬೆಳಗ್ಗೆ ಕಾಫಿ ಕುಡಿಯುವಾಗಲೇ ರಾಘವನ ಫೋನ್. ಊರಿನಲ್ಲಿ ವಿಶೇಷ ಕೈಗಾರಿಕಾ ವಲಯಕ್ಕೆ ನೊಟೀಸ್ ಕೊಡುತ್ತಿದ್ದಾರೆ. ಈಗಾಗಲೇ ಭೂಮಿಗೆ ಹೆಚ್ಚು ಬೆಲೆ ಸಿಗಬೇಕು ಎಂದು ಹೋರಾಟ ಮಾಡಲು ಒಂದು ಸಂಘಟನೆ, ಸ್ವಾಧೀನ ಮಾಡಲೇ ಬಾರದು ಎಂಬ ಹೋರಾಟಕ್ಕೆ ಇನ್ನೊಂದು ಸಂಘಟನೆ ಹುಟ್ಟಿಕೊಂಡಿವೆ ಎನ್ನುವುದು ಆತನ ಫೋನ್‌ನ ಸಾರ.

********

ಫೋನ್‌ ಕರೆ ಬಂದ ಮರುದಿನ ರಿಜಿಸ್ಟ್ರಾರ್‌ಗೆ ತನ್ನ ರಾಜಿನಾಮೆ ಪತ್ರ ಕೊಟ್ಟು, ಕುಲಪತಿಗಳವರಿಗೊಂದು ಪ್ರಣಾಮ ಮಾಡಿ, ಇನ್ನು ಈ ದೇಶಕ್ಕೆ, ನನ್ನಂತಹ ಕೃಷಿ ವಿಜ್ಞಾನಿಯ ಅವಶ್ಯಕತೆ ಬರುವುದಿಲ್ಲ, ಖಜಾನೆಗೆ ಸಖತ್ ಉಳಿತಾಯ ಎಂದು ದೇಶಾವರಿ ನಗೆಯೊಂದು ಬೀರಿ ಹೊರಟುಬಂದ.
ಕ್ಯಾಂಪಸ್‌ನ ಪ್ರಯೋಗದ ಗದ್ದೆಗಳಲ್ಲಿನ ಹೊಸ ಹೊಸ ತಳಿಯ ಭತ್ತಗಳು, ಧಾನ್ಯಗಳ ಪೈರು ಪೇಲವವಾಗಿ ತೊನೆಯುತ್ತಿದ್ದವು

*********

ಹಾಗೆ ಹೊರಟು ಬಂದ ಗೋಪಾಲನೀಗ ಊರಿನ ಸೇತುವೆಯಲ್ಲಿ ನಿಂತಿದ್ದಾನೆ. ಕೆಳಗೆ ಹೊಳೆಯಲ್ಲಿ ಹರಿಯುವ ಕೆನ್ನೀರು ಭೋರ್ಗರೆಯುತ್ತಿದೆ. ಮನದಲ್ಲಿ ನೂರೆಂಟು ಭಾವ. ಮತ್ತೆ ಕೃಷಿಯಲ್ಲಿ ತೊಡಗುವುದೋ, ವಿಶೇಷ ಕೈಗಾರಿಕಾ ವಲಯಕ್ಕೆ ಕೃಷಿಭೂಮಿ ಸ್ವಾಧೀನಕ್ಕೆ ವಿರುದ್ಧದ ಸಮಿತಿಯಲ್ಲಿ ಹೋರಾಟಗಾರನಾಗುವುದೋ...ಮತ್ತೆ ಮಂಗಳೂರಿನಲ್ಲಿ ಏನಾದರೂ ಕೆಲಸ ಹಿಡಿಯುವುದೋ, ಈ ಊರಿನಲ್ಲಿ ನಿಂತರೇನು ಮಾಡಬಹುದು?
ಹೀಗೆ ಸೇತುವೆ ಮಧ್ಯೆ ಉದ್ಭವಿಸಿದ ಪ್ರಶ್ನೆಗಳ ಪ್ರವಾಹದಲ್ಲಿ ಗೋಪಾಲ ಕಳೆದುಹೋದ...

11.11.08

ಚಂದಿರನೊಂದಿಗೆ ಒಂದು ರಾತ್ರಿ....



ಧರೆಗಿಂದು ಬಹಳ
ಬಾಯಾರಿಕೆ
ತುಸುತುಸುವಾಗಿ
ಬೆಳದಿಂಗಳ
ಮೊಗೆದು ಕೊಡು

************

ಪೂರ್ತಿ ಹುಣ್ಣಿಮೆಯಾಗಿ
ಅರಳಬೇಡ
ಮೋಡದ ಮರೆಗೆ ಸರಿ
ನಿನ್ನ ಓರಗೆಯ ತಾರೆಯರನ್ನೂ
ಸ್ವಲ್ಪ ನೋಡಬೇಕಿದೆ


**********

ಬೆಳದಿಂಗಳ ನಶೆಗೆ
ಮರಗಿಡಬಳ್ಳಿ
ತೂಗುತ್ತವೆ ಜೋಕಾಲಿ
ಹಾಡೇ ಇಲ್ಲದ
ಬದುಕಲ್ಲಿ ಅರಳಿದೆ ರಂಗೋಲಿ
Related Posts Plugin for WordPress, Blogger...