28.2.10

ಅಂಗೈಯಲ್ಲಿನ ಬೆರಗು !

ಈ ಹಕ್ಕಿ ಸುಮ್ಮನೆ ಅಂಗೈಯೊಳಗೆ ಬರುವುದು ಸಾಧ್ಯವೇ ಇಲ್ಲ.
ನಮ್ಮ ಹೂತೋಟಗಳಲ್ಲಿನ ಹೂವುಗಳ ಸುತ್ತ ಸುತ್ತುತ್ತಾ ಇರುವ ಈ ಪುಟ್ಟ ಪುಟ್ಟ ಹಕ್ಕಿಗಳಲ್ಲಿ ಸುಮಾರು ೧೩೨ ಥರದವು ಇವೆಯಂತೆ!
Nectariniidae ಕುಟುಂಬಕ್ಕೆ ಸೇರಿದ ಈ ಹಕ್ಕಿಯ ಜೈವಿಕ ಹೆಸರು Nectarinia jugularis. ಹಳದಿ ಎದೆಯ ಸೂರ್ಯಕ್ಕಿ ಅಥವಾ ಆಲಿವ್‌ ಬೆನ್ನಿನ ಸೂರ್ಯಕ್ಕಿ(sunbird) ಎನ್ನುವುದು ಸಾಮಾನ್ಯ ಪದನಾಮ.
Nectariniidae ಕುಟುಂಬದಲ್ಲಿ ಸೂರ್ಯಕ್ಕಿಗಳಲ್ಲದೆ ಸ್ಪೈಡರ್‌ಹಂಟರ್‌ಗಳು, ಫ್ಲವರ್‌ಪೆಕರ್‌ಗಳೂ ಬರುತ್ತವೆ.


ಮೊನ್ನೆ ಮನೆಯಲ್ಲಿ ಕೂತಿದ್ದಾಗ ಅಂಗಳಕ್ಕೆ ಪಟಾರನೆ ಬಿದ್ದುಬಿಟ್ಟ ಈ ಹಕ್ಕಿಗೆ ಏನಾಗಿತ್ತೋ ತಿಳಿಯದು. ಕಾಗೆ ಅಟ್ಟಿಸಿಕೊಂಡು ಬಂತೇ ಅಥವಾ ಬಿಸಿಲ ಧಗೆಗೆ ತಲೆ ತಿರುಗಿತ್ತೇ ಗೊತ್ತಾಗಲಿಲ್ಲ. ಬಿದ್ದು ಗರಬಡಿದಂತೆ ಕೂತಿದ್ದ ಈ ಹಕ್ಕಿಯನ್ನು ಗೆಳತಿ ರಶ್ಮಿ ಎತ್ತಿಕೊಂಡು ನೇವರಿಸಿ, ಅದರ ಮೈಮೇಲೆ ತಂಪು ನೀರು ಎರಚಿದಾಗ ಯಾವುದೇ ದಾಕ್ಷಿಣ್ಯ ತೋರಿಸದೆ ಕೊಕ್ಕು ತೆರೆಯುತ್ತಾ ಕುಡಿಯಿತು ಈ ಸೂರ್ಯಕ್ಕಿ!
ಒಂದಷ್ಟು ಹೊತ್ತು ತನ್ನನ್ನು ಆರೈಕೆ ಮಾಡುತ್ತಿದ್ದವರನ್ನೇ ಕೃತಜ್ಞತಾಪೂರ್ವಕ ನೋಡುತ್ತಿತ್ತು. ಈ ಹಕ್ಕಿಯನ್ನು ಇನ್ನು ಬದುಕಿಸೋದು ಕಷ್ಟವೇನೋ ಅನ್ನಿಸುತ್ತಿತ್ತು ನನಗೆ, ಯಾಕೆಂದರೆ ಹಕ್ಕಿ ಅಷ್ಟು ಕರುಣಾಜನಕವಾಗಿ ಕಾಣಿಸುತ್ತಿತ್ತು.
ಗೆಳತಿಯ ಕೈಲಿ ಭದ್ರವಾಗಿ ಕೂತಿದ್ದ ಹಕ್ಕಿಯ ಒಂದೆರಡು ಫೋಟೋ ಕ್ಲಿಕ್ಕಿಸಿದೆ. ಅಲ್ಲಿಂದ ಹಕ್ಕಿಯನ್ನೆತ್ತಿ ಒಂದು ಮರದ ಹತ್ತಿರ ಬಿಡೋಣ, ಅದರ ತಾಯಿಯಾದರೂ ಬಂದು ಕರೆದೊಯ್ಯಲೂ ಬಹುದು ಎಂದು ಭಾವಿಸಿ ನಾವು ಅದನ್ನು ಮನೆಯೆದುರಿನ ತೆಂಗಿನ ಮರದ ಹತ್ತಿರ ತರುವಾಗಲೇ ಹಕ್ಕಿ ಪುರೃನೆ ಹಾರಿಹೋಗಿ ಗುಲಾಬಿ ಗಿಡದಲ್ಲಿ ಕೂತಿತು!
ಒಂದೆರಡು ನಿಮಿಷ ಕೂತಲ್ಲೇ ರೆಕ್ಕೆ ಬಡಿಯುತ್ತಾ ತನ್ನ ಸಾಮರ್ಥ್ಯ ಪರೀಕ್ಷಿಸಿಕೊಂಡು ಬಳಿಕ ಹಾರಿ ಮಾಯವಾಯಿತು!

12.2.10

ಕನಸಿನ ಬಂಡಿಗೆ ನಿಲ್ದಾಣವಿಲ್ಲ

ಅದು ಫೆಬ್ರವರಿಯ ಥಂಡಿ ಸುರಿಯುವ ರಾತ್ರಿ. ನಕ್ಷತ್ರಗಳ ಹಿಮ್ಮೇಳದಲ್ಲಿ ಬೆಳ್ಳನೆ ಬೆಳದಿಂಗಳು ಚೆಲ್ಲುತ್ತಾ ಚಂದಿರ ಸವಾರಿ ಹೊರಟಿರುವಾಗಲೇ ಜಮ್ಮುತಾವಿ ಎಕ್ಸ್‌ಪ್ರೆಸ್ ರೈಲು ಯಾವುದೋ ಗೋಧಿಯ ಬಯಲುಗದ್ದೆಗಳ ನಡುವೆ ಮಂಜು ಪರದೆ ಸೀಳುತ್ತಾ ಓಡುತ್ತಿದೆ.
ರೇಲು ಗಾಡಿಯ ಸ್ಲೀಪರ‍್ ಕೋಚ್ ಎಸ್‌-8ರಲ್ಲಿ ಇರುವ ಕೆಲವೇ ಪ್ರಯಾಣಿಕರು ತಮ್ಮ ಇಹಲೋಕ ಪರಿವೆಯೆಲ್ಲ ಮರೆತು ನಿದ್ರೆ ಮಾಡುತ್ತಿದ್ದರೆ ಇಡೀ ಬೋಗಿಯೇ ಆಲಸ್ಯದಿಂದ ತುಂಬಿರುವಂತೆ ಕಾಣುತ್ತದೆ. ಮಬ್ಬು ಬೆಳಕಲ್ಲಿ ಅಪ್ಪರ‍್ ಬರ್ತ್‌ನಲ್ಲಿ ಬ್ಯಾಗ್‌ಗೆ ಬೆನ್ನು ಕೊಟ್ಟು ನಿದ್ರಿಸಲು ಯತ್ನಿಸುತ್ತಿದ್ದಾನೆ ಆ ೨೫ರ ಹುಡುಗ. ಆತ ಮಗ್ಗುಲಾಗಿ ಮಲಗಿದ್ದಾನೆ.
ಕಣ್ಣೆವೆ ಮುಚ್ಚಿಕೊಂಡರೆ ಸಾಕು ಆಕೆ ಕಣ್ಣಮುಂದೆ ಬರುತ್ತಾಳೆ. ಕಣ್ಣೆವೆ ತೆರೆದರೆ ಅಲ್ಲೇ ಮುಂಭಾಗದ ಮಧ್ಯೆಯ ಬರ್ತ್‌ನಲ್ಲೇ ಮಲಗಿದ್ದಾಳೆ. ಆಕೆಯ ಕಂಗಳಲ್ಲೂ ಈತನ ಪ್ರತಿಬಿಂಬ ಕಂಡಂತಿದೆ. ನಿನ್ನೆ ಬೆಳಗ್ಗಿನಿಂದ ಆತನಿಗೆ ಆಕೆ ಪರಿಚಯವಾಗಿದ್ದಾಳೆ, ಚೂಡಿದಾರ‍್ ಉಟ್ಟ ಸರಳ ಹುಡುಗಿ.
ಮಾತಿಗಾಗಿ ಆತನೂ ತಡವರಿಸಿದ್ದಾನೆ. ಆಕೆಯೂ ಅಂತಹಾ ಮಾತುಗಾರ್ತಿ ಅಲ್ಲ. ಆಕೆಯ ತಂದೆ ತಾಯಿ ಅಲ್ಲೇ ಕೆಳಗಿನ ಎರಡು ಬರ್ತ್‌ಗಳಲ್ಲಿ ಮಲಗಿದ್ದಾರೆ.
ಅವರು ಬೇಕೆಂದಾಗ ಪೇಪರನ್ನೋ, ನೀರನ್ನೋ ತಂದು ಕೊಟ್ಟು ಈತ ಉಪಕಾರ ಮಾಡಿದ್ದಿದೆ. ನನ್ನ ಬಗ್ಗೆ ಅವರೇನಂದುಕೊಂಡಿರಬಹುದು ಎಂದು ಆತ ಚಿಂತೆ ಮಾಡಿಲ್ಲ, ಆದರೆ ಗುಲಾಬಿ ವರ್ಣದ ಚೂಡಿದಾರದ ಆ ಚೆಲುವೆ ಮುಖ ನೋಡಿ ನಕ್ಕಾಗೆಲ್ಲ ಈತ ನಡುಗುತ್ತಾನೆ.
ಈ ಮಂಗಳೂರು ಹುಡುಗನಿಗೆ ಕನ್ನಡ, ಇಂಗ್ಲಿಷ್ ಬರುತ್ತದೆ. ವಿಚ್‌ ಪ್ಲೇಸ್ ಆರ‍್ ಯೂ ಫ್ರಂ, ಓ..ಯು ಆರ‍್.ಕನ್ನಡಿಗ...ಎಂದು ಪರಿಚಯ ಅಷ್ಟೇ ಮಾಡಿಕೊಂಡಿದ್ದಾಳೆ. ಆಕೆ ಅಹ್ಮದಾಬಾದ್‌ನವಳು.

ಇನ್ನು ಮೂರು-ನಾಲ್ಕು ಗಂಟೆಯಲ್ಲಿ ಬೆಳಗಾಗುವಾಗ ಅಹ್ಮದಾಬಾದ್ ಸ್ಟೇಷನ್ ಬರುತ್ತದೆ. ಆಕೆ ಅಲ್ಲಿ ಇಳಿಯು‌ತ್ತಾಳಂತೆ. ಬೆಳಗ್ಗಿನಿಂದಲೇ ಆಗಾಗ್ಗೆ ಮೊಬೈಲ್‌ನಲ್ಲಿ ಮೆಸೇಜ್ ನೋಡುತ್ತಿದ್ದವಳು, ಆಕೆಯ ಪ್ರಿಯಕರನ ಅಲ್ಲ, ಗೆಳೆಯರ ಸಂದೇಶ ಓದುತ್ತಿದ್ದಳೋ ಏನೋ. ಮಧ್ಯಾಹ್ನ ನಂತರ ಮೊಬೈಲ್ ನೋಡಿಲ್ಲ. ರೋಮಿಂಗಲ್ವಾ ಅಂತ ಬೆಂಗಳೂರು ಹುಡುಗ ಮೊಬೈಲ್ ಆಫ್ ಮಾಡಿಟ್ಟಿದ್ದಾನೆ.
ಆಕೆಯ ಮೇಲೆ ಆತನಿಗೆ ಪ್ರೇಮವೇ, ಆಕರ್ಷಣೆಯೇ ಗೊತ್ತಿಲ್ಲ. ಗುಜರಾತಿ ಹುಡುಗಿ ಮನದೊಳಗೆ ಗೂಡು ಕಟ್ಟಿದಳೇ? ಆತನಿಗೆ ಗೋಜಲು.
‘ನೀ ಹೋದರೆ ಮತ್ತೆ ನನ್ನ ಒಂದು ದಿನದ ಪ್ರಯಾಣ ಮಹಾ ಬೋರಿಂಗ್’ ಎನ್ನ ಹೊರಟಾಗ ರೇಲು ಇಂಜಿನ್ ಸುರಂಗ ಹೊಕ್ಕು ಕರ್ಕಶವಾಗಿ ಸೀಟಿ ಹಾಕುತ್ತಾ ವೇಗ ಹೆಚ್ಚಿಸಿಕೊಂಡಿವೆ. ಮಾತುಗಳನ್ನು ಹುಡುಗ ನುಂಗಿಕೊಂಡಿದ್ದಾನೆ. ಈತನ ಮುಖವನ್ನೇ ನೋಡುತ್ತಿದ್ದಾಕೆ ನುಂಗಿದ ಮಾತುಗಳನ್ನು ಹೆಕ್ಕಿಕೊಂಡಂತೆ ಮುಗುಳ್ನಗುತ್ತಾಳೆ. ಕಿಟಿಕಿಯಿಂದ ಒಳಹೊಕ್ಕ ಕುಳಿರ್ಗಾಳಿಗೆ ಮಲಗಿದ್ದವಳ ತಲೆಕೂದಲಿನ ಜೊಂಪೆ ಒಮ್ಮೆ ಮೇಲೆದ್ದು ಅಲೆ ಅಲೆಯಾಗಿ ಕಣ್ಣು, ಕೆನ್ನೆ ಮೇಲೆ ಜಾರುತ್ತಾ ಮುಖವನ್ನು ಆವರಿಸಿದ ದೃಶ್ಯ ಮನಃಪಟಲದಲ್ಲಿ ಅಚ್ಚೊತ್ತಿದೆ.
ಚಂದಿರ ರಾತ್ರಿ ಪಾಳಿ ಮುಗಿಸಿ ಬದಿಗೆ ಸರಿಯಲಿದ್ದಾನೆ, ಸೂರ್ಯನಿಗೆ ಹೊಸ ಪಾಳಿ ಇನ್ನು. ಪಾಳಿ ಬದಲಾವಣೆಯಾಗುವಾಗ ಆಕೆ ತನ್ನವರೊಂದಿಗೆ ರೈಲ್ವೇ ನಿಲ್ದಾಣದಲ್ಲಿ ಇಳಿದು ಬಿಡುತ್ತಾಳೆ. ಆಕೆ ಮಲಗಿದ್ದ ಬರ್ತ್‌ಗೆ ಇನ್ಯಾರೋ ಬಂದು ಬಿಡುತ್ತಾರೆ ಎಂಬ ನೆನಪುಗಳೇ ಈಗ ಆತನನ್ನು ಇರಿಯುತ್ತವೆ.
ಎಷ್ಟೊಂದು ಮಾತುಗಳು ಮನದ ಫ್ಯಾಕ್ಟರಿಯಲ್ಲಿ ಸಿದ್ಧಗೊಳ್ಳುತ್ತಿದ್ದವು, ಆಕೆಯ ಪಿಂಕ್ ಚೂಡಿ, ಅಲೆ ಅಲೆಗೂದಲು, ಗುಜರಾತಿ ಮಿಶ್ರಿತ ಇಂಗ್ಲಿಷ್, ಕಣ್ಣಿನ ನೇರನೋಟ ಇವೆಲ್ಲ ಸೇರಿ ಆತನಿಗೆ ಆಕೆಯ ಬಗ್ಗೆ ಯಾವ ಭಾವನೆ ಮೂಡುತ್ತಿದೆ ಎನ್ನುವುದನ್ನು ಇನ್ನೂ ನಿರ್ಧಾರ ಮಾಡುವ ಮೊದಲೇ ಆಕೆ ಹೊರಟು ಹೋಗುವವಳಿದ್ದಾಳೆ. ಆಕೆ ಇನ್ನೊಂದಿಷ್ಟು ಹೊತ್ತು ತನ್ನೊಂದಿಗಿದ್ದರೆ...
ಆತನ ಮನದ ಕೊರಗು ಆಕೆಗೂ ಇತ್ತೇ ಗೊತ್ತಿಲ್ಲ...ಸಂಜೆಯಾದಾಗ ಮುದುಡುವ ಗುಲಾಬಿಯಂತಿರುವ ಮುಖ ಏನೋ ಹೇಳುತ್ತಿದೆ.
ಈಗ ಬೆಳಕು ಹರಿದಿದೆ. ವೇಗ ಇಳಿಸಿದ ರೇಲು ನಿಲ್ದಾಣದತ್ತ ಜಾರುತ್ತಿದೆ. ಆಕೆಯ ಪೋಷಕರು ಬ್ಯಾಗೇರಿಸಿದ್ದಾರೆ. ಆಕೆಯೂ ತನ್ನ ತುರುಬು ಕಟ್ಟಿಕೊಂಡು ನಿದ್ದೆಗಣ್ಣಿಗೆ ತಣ್ಣೀರೆರಚಿ ಬಂದು ಸಿದ್ಧಳಾಗುತ್ತಿದ್ದಾಳೆ, ಆತನ ಕನಸಿನ ಬಂಡಿಯಿಂದ ಇಳಿದು ಹೋಗುವುದಕ್ಕೆ.
ಪ್ಲಾಟ್‌ಫಾರಂ ಬಂದು ನಿಂತಿದೆ ರೇಲು, ಆಕೆಯ ಹೆತ್ತವರ ಕೈಲಿದ್ದ ಬ್ಯಾಗ್ ಈತ ತೆಗೆದುಕೊಂಡಿದ್ದಾನೆ, ಅವರನ್ನು ಕೆಳಗಿಳಿಸಿ, ಬ್ಯಾಗ್ ಕೈಗೆ ಕೊಡುತ್ತಾನೆ. ಹಮ್ ಫಿರ‍್ ಮಿಲೇಂಗೇ....ನಕ್ಕ ಆಕೆಯ ತಂದೆ ಹುಡುಗನ ಬೆನ್ನು ಸವರಿದ್ದಾನೆ, ತಾಯಿಗಂಟಿ ನಿಂತ ಹುಡುಗಿ ತೀಕ್ಷ್ಣವಾಗಿ ಈತನತ್ತ ನೋಡುತ್ತಾಳೆ.
ಆಕೆಯ ಮೊಬೈಲ್ ನಂಬರ‍್ ಕೇಳಿ ಬಿಡಲೇ ಬೇಕೇ ಎನ್ನುವ ಗೊಂದಲದಲ್ಲಿದ್ದಾನೆ ಹುಡುಗ...ಆಗಲೇ ರೈಲು ಹೊರಟಿದೆ ಮತ್ತೆ...
ಒಲವೂ ಅಲ್ಲದ, ಸ್ನೇಹವೂ ಅಲ್ಲದ ನವಿರು ಭಾವಗಳ ಕನಸು ಹಾಗೇ ಹರಿಯಲಿ ಎನ್ನುತ್ತಾ ಹುಡುಗ ಅವ್ಯಕ್ತ ನೋವಿನಿಂದ ತಿರುಗಿಯೂ ನೋಡದೆ ರೈಲು ಏರಿದ್ದಾನೆ....ಲವ್‌ ಯೂ ಎಂದು ಕೂಗಿ ಹೇಳೋಣ ಎಂದು ಬಾಯ್ತೆರೆದರೆ ಮತ್ತೆ ಅದೇ ರೈಲಿನ ಸೀಟಿ....
ಮಾತುಗಳು ಬಾಯಲ್ಲೇ ಉಳಿದಿವೆ...ಆಕೆಯ ಕಂಗಳ ಅಂಗಳದಲ್ಲೆ ಹೊಳೆದ ಕಂಬನಿ ಮಾತ್ರ ಇನ್ನೂ ಹುಡುಗನ ಕಂಗಳಲ್ಲಿ ಶಾಶ್ವತವಾಗಿವೆ.

pic : pixadus.com

ಪ್ರೇಮ ಎಂಬ abstract ಭಾವನೆಯೊಂದರ ಸುತ್ತ ಸುತ್ತುವ ಕೆಲ ಯೋಚನೆಗಳೇ ಈ ಕಥೆಗೆ ಮಾರ್ಗದರ್ಶೀ ಸೂತ್ರ, ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ ಈ ಕಥೆ

3.2.10

ನಶ್ಯ ಪುರಾಣಂ

ನಾನು ಮೊದಲ ಬಾರಿಗೆ ನಶ್ಯ ನೋಡಿದ್ದು ಸುಮಾರು೩-೪ ವರ್ಷದವನಿರಬೇಕಾದರೆ ಪೆರ್ಲದ ದಾಮು ಭಂಡಾರಿಗಳ ಕ್ಷೌರದಂಗಡಿಯಲ್ಲಿ.
ದಾಮು ಭಂಡಾರಿಯವರು ಪ್ರತಿ ಗಿರಾಕಿಯ ಕ್ಷೌರ ಮಾಡಿದ ಬಳಿಕ ಮಧ್ಯಂತರದಲ್ಲಿ ತಪ್ಪದೇ ಚಿಟಿಕೆ ನಶ್ಯ ಹಾಕುವ ಗಮ್ಮತ್ತನ್ನು ನೋಡುವುದಕ್ಕಾಗೇ ನಾನು ಅಜ್ಜನೊಂದಿಗೆ ಕ್ಷೌರದಂಗಡಿಗೇ ಹೋಗಿದ್ದುಂಟು!
ಶುದ್ಧ ಬಿಳಿಯ ಪಂಚೆ, ಅದೇ ಬಣ್ಣದ ಶುಭ್ರ ಖಾದಿ ಬನೀನು ಧರಿಸಿದ್ದ ಇಳಿ ವಯಸ್ಸಿನ ಭಂಡಾರಿಯವರನ್ನು ನೋಡುವಾಗಲೇ ಗೌರವ ಬರುವುದು. ಅವರು ಹಳೇ ಅಲ್ಮಾರಿಯ ಮೂಲೆಗೆ ಕೈಹಾಕಿ, ಅಲ್ಲಿಂದ ನಶ್ಯ ತುಂಬಿದ್ದ ಆಕರ್ಷಕ ಗಾಜಿನ ಚಿಕ್ಕ ಗಾತ್ರದ ಸಪುರ ಕೊರಳಿನ ಬಾಟಲಿಯನ್ನು ಹೊರ ತೆಗೆದು, ಹೊರ ಬಂದು ಎಡಗೈ ಅಗಲಿಸಿ, ಬಾಟಲಿಯಿಂದ ನಶ್ಯವನ್ನು ಕೈಗೆ ಹಾಕಿಕೊಂಡು ಅದರಿಂದ ಒಂದು ಚಿಟಿಕೆ ಪುಡಿ ಮಾತ್ರವೆ ಬಲ ಅಂಗುಷ್ಠ ಮತ್ತು ತೋರು ಬೆರಳಿನಲ್ಲಿ ಇರಿಸಿ, ಉಳಿದದ್ದು ಕೊಡವಿ ಅದೊಂದು ಗತ್ತಿನಲ್ಲಿ ನಶ್ಯ ಏರಿಸುತ್ತಿದ್ದರೆ ನನಗೇ ನಶ್ಯ ಹಾಕಿದ ಹಾಗೆ ಆಗುತ್ತಿತ್ತು.
ಇನ್ನು ಮದುವೆ, ಪೂಜೆಯಂತಹ ಸಮಾರಂಭಗಳಲ್ಲೂ ನಶ್ಯ ಹಾಕುವವರು ಒಂದು ಕಡೆ ಸೇರಿಕೊಂಡು ಅದೋ ಇದೋ ರಾಜಕೀಯ ಮಾತಾಡುತ್ತಾ ಹೇಗೆ ಈ ಬಾರಿ ಅಡಕೆಗೆ ರೇಟ್ ಏರಬಹುದೋ ಏನೋ ಎನ್ನುತ್ತಾ ನಶ್ಯ ಹಾಕುವುದು, ಆ ಬಳಿಕ ಲಯಬದ್ಧವಾಗಿ ಅನೇಕರು ‘ಆಆಆಆಆಆ ಕ್ಷೀಈಈಈಈಈಈ’ ಎಂದು ಸೀನುವುದು ಏನು ದೃಶ್ಯ!
ಇನ್ನು ಕೆಲವರು ಒಂದೊಂದು ಪದವನ್ನು ಮಧ್ಯೆ ಆಕ್ಷೀ ಬೆರೆಸಿಕೊಂಡು ಹೇಳುವುದಂತೂ ನಾಟಕೀವಾಗಿರುತ್ತಿತ್ತು.


ಇದರಿಂದ ನಾನೂ ಪ್ರೇರಿತನಾಗಿ ಅನುಸರಿಸಲು ಹೋಗಿ ಮನೆಯಲ್ಲಿ ಚೆನ್ನಾಗಿ ಬೈಗುಳ ತಿಂದದ್ದಿದೆ. ನಾನು, ನನ್ನ ಓರಗೆಯ ಇತರ ಕೆಲ ಮಕ್ಕಳಿಗೂ ನಶ್ಯದಲ್ಲಿ ಆಕರ್ಷಣೆ ಬರಲು ಕಾರಣವೇ ಈ ಆಕ್ಷಿ ಎಂದರೂ ತಪ್ಪಲ್ಲ! ನಶ್ಯವನ್ನು ಹದವಾಗಿ ಏರಿಸಿದಾಗ ಶ್ವಾಸಕೋಶದ ಅಂತರಾಳದಲ್ಲೆಲ್ಲೋ ಉದ್ಭವವಾಗುವ ಆಕ್ಷಿ ನಿಧಾನವಾಗಿ ಕಂಠದ ಮೂಲಕ ಹೊರ ಬರುತ್ತಿರುವಾಗ ಕೆಲವರು ಕಣ್ಮುಚ್ಚಿ ಅಥವಾ ಅರೆಕಣ್ಣು ಮುಚ್ಚಿ, ಬಾಯಿ ಆಆಆಆ ಮಾಡಿಕೊಂಡು ಕೊನೆಗೆ ಆಕ್ಷೀ ಎನ್ನುತ್ತಾ ಮಹದಾನಂದ ಪಡೆಯುವುದನ್ನು ನೋಡಿದ್ದೇನೆ :) ಜೋರು ಶೀತವಾದ ಸಂದರ್ಭದಲ್ಲಿ ಮಾತ್ರ ಮೂಗು ಕ್ಲಿಯರಾಗಲು ಕೆಲವೊಮ್ಮೆ ಅಜ್ಜನೇ ನನಗೆ ನಶ್ಯವನ್ನು ಕರುಣಿಸುತ್ತಿದ್ದರು.


ಯಾಕೆ ಇದೆಲ್ಲಾ ನೆನಪಾಯಿತೆಂದರೆ,ಈಗೀಗ ನಮ್ಮ ಕಡೆಯಂತೂ ನಶ್ಯ ಹಾಕುವವರೇ ಕಾಣಸಿಗುವುದಿಲ್ಲ, ಕೆಲವೊಂದು ಅಜ್ಜಂದಿರನ್ನು ಬಿಟ್ಟರೆ. ಇದು ಒಳ್ಳೆಯದೋ ಕೆಟ್ಟದೋ ಎಂದು ವಿಶ್ಲೇಷಿಸೋದು ನನ್ನ ಉದ್ದೇಶವಲ್ಲ.
ನಿಜ ಹೊಗೆಸೊಪ್ಪಿನಿಂದ ತಯಾರಿಸಿದ ಎಲ್ಲಾ ರೀತಿಯ ವಸ್ತುಗಳೂ ಅತಿಯಾದರೆ ದೇಹಕ್ಕೆ ಮಾರಕವೇ. ಬಹುಷಃ ಸಿಗರೇಟ್, ಗುಟ್ಕಾದ ಜನಪ್ರಿಯತೆಯಲ್ಲಿ ನಶ್ಯದ ಚಟ ಮಸುಕಾಗಿರಬಹುದೇನೋ..
ಯಾವಾಗಲೋ ಒಮ್ಮೆ ನಶ್ಯ ಏರಿಸಿ ಆಕ್ಷೀ ಎನ್ನುವ ಆನಂದ ಅನುಭವಿಸಿದವರಿಗೆ ಮಾತ್ರ ಆ ಖುಷಿ ಬೇರೆಲ್ಲೂ ಸಿಗದು :)
Related Posts Plugin for WordPress, Blogger...